ಪೊಲೀಸ್ ಇನಸ್ಪೆಕ್ಟರ್ ನಾಪತ್ತೆ: ಪೊಲೀಸರ ಹುಡುಕಾಟ!
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಹಣ ದುರುಪಯೋಗ ಪ್ರಕರಣ ಸಂಬಂಧ ಬಿಡದಿ ಪೊಲೀಸ್ ಠಾಣೆ ಇನಸ್ಪೆಕ್ಟರ್ ಶಂಕರ್ ನಾಯ್ಕ್ ವಿರುದ್ಧ ದೂರು ದಾಖಲಾಗಿದ್ದು, ಸಿಸಿಬಿ ಪೊಲೀಸರು ಅವರಿಗಾಗಿ ಶೋಧ ನಡೆಸಿದ್ದಾರೆ.
ಪ್ರಕರಣಕ್ಕೆ ತಡೆ ಕರಿ ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡಿದ್ದು, ಪ್ರಕರಣಕ್ಕೆ ನೀಡಿದ್ದ ತಡೆಯಾಜ್ಞೆಯೂ ತೆರವುಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದ್ದು, ಹಾಗಾಗಿ ಅವರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ.
ಅಕ್ರಮವಾಗಿ ಪ್ರಕರಣ ದಾಖಲಿಸಿ 72 ಲಕ್ಷ ರೂ. ವಸೂಲಿ ಮಾಡಿದ ಪ್ರಕರಣ ಸೇರಿದಂತೆ ಶಂಕರ ನಾಯ್ಕ್ ವಿರುದ್ಧ ಹಲವಾರು ಪ್ರಕರಣಗಳಿವೆ.
2022ರಲ್ಲಿ ಬ್ಯಾಟರಾಯನಪುರ ಠಾಣೆ ಪಿಐ ಆಗಿದ್ದಾಗ ಉದ್ಯಮಿಯೊಬ್ಬರ ಕಾರು ಚಾಲಕನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಆತನಿಂದ ಜಪ್ತಿ ಮಾಡಿದ ₹72 ಲಕ್ಷವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಶಂಕರ್ ನಾಯಕ್ ವಿರುದ್ಧ ಪ್ರಕರಣ ದಾಖಲಾಗಿ ಸಿಸಿಬಿ ತನಿಖೆ ನಡೆದಿದೆ. ಅದೇ ರೀತಿಯ ಮತ್ತೆರಡು ಕೃತ್ಯಗಳು ಬಯಲಾಗಿವೆ.
2022ರ ಆಗಸ್ಟ್ 19ರಿಂದ 25ರವರೆಗೆ ಸುಮಿತ್ ಎಂಬಾತನನ್ನು ಅಂದು ಬ್ಯಾಟರಾಯನಪುರ ಠಾಣೆ ಪಿಐ ಶಂಕರ್ ನಾಯಕ್ ಅಕ್ರಮ ಬಂಧನದಲ್ಲಿಟ್ಟು, ಆತನಿಂದ ಸಿಪಿಯು, ಲ್ಯಾಪ್ಟಾಪ್ ಮತ್ತು ಪೆನ್ಡ್ರೈವನ್ನು ಜಪ್ತಿ ಮಾಡಿದ್ದರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸಂತ್ರಸ್ತ ಸುಮಿತ್ ತಾಯಿ ಸಂಧ್ಯಾ ದೂರು ನೀಡಿದ್ದರು. ಆಗ ಈ ಬಗ್ಗೆ ವಿಚಾರಣೆ ನಡೆಸಿದ ಕೆಂಗೇರಿ ಗೇಟ್ ಉಪವಿಭಾಗ ಎಸಿಪಿ ಭರತ್ ಎಸ್.ರೆಡ್ಡಿ ಅವರು, ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸುಮಿತ್ನನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಸಂಗತಿ ಖಚಿತವಾಗಿತ್ತು. ಅಲ್ಲದೆ ಈ ಸಂಬಂಧ ಸಬ್ ಇನ್ಸ್ಪೆಕ್ಟರ್ ಕರಿಯಣ್ಣ ಹಾಗೂ ಠಾಣೆ ಸಿಬ್ಬಂದಿ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಅಪರಾಧ ಪ್ರಕರಣದಲ್ಲಿ ಜಪ್ತಿ ಮಾಡಿದ ₹8.32 ಲಕ್ಷವನ್ನು ಮರಳಿಸುವಂತೆ ನ್ಯಾಯಾಲಯ ಆದೇಶ ನೀಡಿದರೂ ಸಹ ಸಂತ್ರಸ್ತರಿಗೆ ನೀಡದೆ ವಂಚಿಸಿದ ಆರೋಪ ಪಿಐ ಶಂಕರ್ ನಾಯಕ್ ವಿರುದ್ಧ ಕೇಳಿ ಬಂದಿದೆ.
2022ರಲ್ಲಿ ಅಪರಾಧ ಪ್ರಕರಣದಲ್ಲಿ ₹8.85 ಲಕ್ಷವನ್ನು ಪಿಐ ಶಂಕರ್ ನಾಯಕ್ ಜಪ್ತಿ ಮಾಡಿದ್ದರು. ಈ ಹಣವನ್ನು ಮರಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಹಣ ಮರಳಿಸುವಂತೆ ತನಿಖಾಧಿಕಾರಿಗೆ ಸೂಚಿಸಿತ್ತು. ಆದರೆ ತಮ್ಮಿಂದ ಬಲವಂತವಾಗಿ ಖಾಲಿ ಹಾಳೆ ಮೇಲೆ ಸಹಿ ಪಡೆದು ಹಣ ನೀಡಲು ಶಂಕರ್ ನಾಯಕ್ ನಿರಾಕರಿಸಿದ್ದರು. ಅಷ್ಟರಲ್ಲಿ ಬ್ಯಾಟರಾಯಪುರ ಠಾಣೆಯಿಂದ ಶಂಕರ್ ನಾಯಕ್ ವರ್ಗಾವಣೆಗೊಂಡಿದ್ದರು. ಆದರೆ ತಮ್ಮ ಸ್ಥಾನಕ್ಕೆ ಹೊಸದಾಗಿ ಬಂದ ಪಿಐ ನಿಂಗಣ್ಣಗೌಡ.ಎ.ಪಾಟೀಲ್ ಅವರಿಗೆ ಈ ಪ್ರಕರಣದಲ್ಲಿ ಜಪ್ತಿಯಾದ ಹಣದ ಬಗ್ಗೆ ಮಾಹಿತಿ ನೀಡದೆ ಶಂಕರ್ ನಾಯಕ್ ತೆರಳಿದ್ದರು. ಅಲ್ಲದೆ ಜಪ್ತಿಯಾದ ₹20 ಲಕ್ಷವನ್ನು ಖಜಾನೆಗೆ ಜಮೆ ಮಾಡದೆ ಮರೆಮಾಚಿರುವುದು ಎಸಿಪಿ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು ಎಂದು ತಿಳಿದು ಬಂದಿದೆ.
ಬ್ಯಾಟರಾಯನಪುರದ ಸಂಧ್ಯಾ ರಮೇಶ್ ಮತ್ತು ಕೆ.ಆರ್.ಪುರದ ವಂಸತ ಆರೋಪ ಮಾಡಿದ್ದು, ಈ ಆರೋಪಗಳ ಬಗ್ಗೆ ಇಲಾಖಾ ಮಟ್ಟದ ವಿಚಾರಣೆ ನಡೆಸಿ ಆರೋಪಿತ ಪಿಐ ಶಂಕರ್ ನಾಯಕ್ ವಿರುದ್ಧ ಶಿಸ್ತು ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಕೆಂಗೇರಿ ಉಪ ವಿಭಾಗದ ಎಸಿಪಿ ವರದಿ ಸಲ್ಲಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ