ಪ್ರಗತಿವಾಹಿನಿ ಸುದ್ದಿ: ಥೈಲ್ಯಾಂಡ್ ನಿಂದ ಹೈಡೋ ಗಾಂಜಾವನ್ನು ಆಮದು ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳು ಮತ್ತು ಪರಿಚಿತರಿಗೆ ಪೂರೈಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಾಂಜಾ ಆಮದು ಮಾಡಿಕೊಳ್ಳುತ್ತಿದ್ದ ತವನೀಶ್ ಬಂಧಿತ ಆರೋಪಿ, ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ತವನೀಶ್ ಆಗಾಗ ಡಿ.ಜೆ ಪಾರ್ಟಿಗಳಲ್ಲಿ ಭಾಗಿಯಾಗಲು ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದ ಎನ್ನಲಾಗಿದೆ.
ಅದೇ ಸಮಯದಲ್ಲಿ ತವನೀಶ್ ಗೆ ಕೇರಳ ಮೂಲದ ಸೈಜು ಎಂಬಾತನ ಪರಿಚಯವಾಗಿದೆ. ಬಳಿಕ ಸೈಜುನ ಮೂಲಕ ಥೈಲ್ಯಾಂಡ್‌ನಿಂದ ಹೈಡೋ ಗಾಂಜಾವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ನಂತರ ಗಾಂಜಾವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿ, ಬೇಕರಿ ಐಟಂ ಬಾಕ್ಸ್‌ಗಳಲ್ಲಿ ತುಂಬಿ, ಅವುಗಳನ್ನು ಬಿಸ್ಕೆಟ್, ಚಾಕಲೇಟ್ ಎಂದು ಬಿಂಬಿಸಿ ಸೈಜು ಮೂಲಕ ಬೆಂಗಳೂರಿಗೆ ಆಮದು ಮಾಡಿಕೊಳ್ಳುತ್ತಿದ್ದ.
ಸೆಪ್ಟೆಂಬರ್ 4ರಂದು ಆಂಧ್ರಹಳ್ಳಿಯ ಕಾಲೇಜ್ ವೊಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಆರೋಪಿ ತವನೀಶ್ ನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಸೈಜು ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಸದ್ಯ ಬಂಧಿತ ಆರೋಪಿಯಿಂದ ಸುಮಾರು 1.22 ಕೋಟಿ ರೂ ಮೌಲ್ಯದ 2 ಕೆ.ಜಿ 770 ಗ್ರಾಂ ಹೈಡೋ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ