*ಸಿವಿಲ್ ವಾಜ್ಯಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ:ಪೊಲೀಸ್ ಮಹಾನಿರ್ದೇಶಕ ಸಲೀಂ*

ಪ್ರಗತಿವಾಹಿನಿ ಸುದ್ದಿ: ಸಿವಿಲ್ ವಾಜ್ಯಗಳಲ್ಲಿ , ಪೊಲೀಸರ ಹಸ್ತಕ್ಷೇಪ ಇನ್ನೂ ಮುಂದುವರಿದ ಹಿನ್ನೆಲೆಯಲ್ಲಿ, ಪೊಲೀಸ್ ಮಹಾನಿರ್ದೇಶಕ ಡಾ. ಎಂ ವಿ ಸಲೀಂ ಅವರು ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಅನಾವಶ್ಯಕವಾಗಿ ತಲೆ ಹಾಕುತ್ತಿರುವ ಕುರಿತು ಹಲವು ಬಾರಿ ಗಂಭೀರ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳು ಹಲವು ತೀರ್ಪುಗಳನ್ನು ನೀಡುತ್ತಾ, ಸಿವಿಲ್ ಹಕ್ಕುಗಳ ವಿಚಾರದಲ್ಲಿ ನಿರ್ಣಯ ಮಾಡಲು ಪೊಲೀಸ್ ಇಲಾಖೆಗೂ ಅಧಿಕಾರವಿಲ್ಲ, ಕೇವಲ ಸಿವಿಲ್ ನ್ಯಾಯಾಲಯವೇ ತೀರ್ಮಾನಿಸಬಲ್ಲದು ಎಂದು ಸ್ಪಷ್ಟಪಡಿಸಿದ್ದವು.
ಮಾರ್ಗಸೂಚಿಯ ಪ್ರಕಾರ, ಕರಾರು ಉಲ್ಲಂಘನೆ, ಬಾಡಿಗೆ-ಮಾಲೀಕನ ವ್ಯಾಜ್ಯ, ಆಸ್ತಿ ಮಾಲೀಕತ್ವ-ಸ್ವಾಧೀನ ಹಕ್ಕುಗಳು, ಪೂಜಾ ಹಕ್ಕುಗಳ ವಿವಾದಗಳು, ವಾಣಿಜ್ಯ ವ್ಯಾಜ್ಯಗಳು ಮುಂತಾದವು ಕ್ರಿಮಿನಲ್ ಸ್ವರೂಪವಿಲ್ಲದ ಪ್ರಕರಣಗಳಲ್ಲಿ ಪೊಲೀಸರು ಮಧ್ಯ ಪ್ರವೇಶಿಸಬಾರದು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಪರಿಸ್ಥಿತಿ ಎದುರಾಗಿದಷ್ಟೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಮಾರ್ಗಸೂಚಿ ಹೇಳಿದೆ.
ದೂರಿದಾರರಿಗೆ ಸೂಕ್ತ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಲು ಸೂಚಿಸಬೇಕು. ಮತ್ತಷ್ಟು ಮುಖ್ಯವಾಗಿ, ಯಾವುದೇ ಪೊಲೀಸ್ ಅಧಿಕಾರಿ ಸಿವಿಲ್ ವಿವಾದದಲ್ಲಿ ಒಂದು ಪಕ್ಷಕ್ಕೆ ಬೆಂಬಲ ನೀಡಿ ಅನ್ಯಾಯ ಮಾಡಿದರೆ, ಅದನ್ನು “ಅಪರಾಧಿಕ ದುರ್ನಡತೆ” ಎಂದು ಪರಿಗಣಿಸಲಾಗುವುದು ಮತ್ತು ಇಲಾಖೆ ಅವರ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆ ಎಚ್ಚರಿಸಿದೆ.