Advertisement -Home Add

ಬೆಳಗಾವಿ ಲೋಕಸಭೆ ಉಪಚುನಾವಣೆ: ಎರಡೂ ಪಕ್ಷಗಳಲ್ಲಿ ಮಹತ್ವದ ಬೆಳವಣಿಗೆ

ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭಿಸಿದ ಕಾಂಗ್ರೆಸ್, ಬಿಜೆಪಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಕಣ ಈಗ ರಂಗೇರುತ್ತಿದೆ.

ಈವರೆಗೂ ಒಳಗೊಳಗೇ ನಡೆಯುತ್ತಿದ್ದ ಚಟುವಟಿಕೆಗಳು ಈಗ ಬಹಿರಂಗವಾಗಿ ನಡೆಯಲಾರಂಭಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಅಧಿಕೃತವಾಗಿ ಕಾರ್ಯ ಆರಂಭಿಸಿವೆ. ಎರಡೂ ಪಕ್ಷಗಳು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಿವೆ.

ಬೆಳಗಾವಿ ಲೋಕಸಭಾ ಕ್ಷೇತ್ರ ಮೊದಲು ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಆದರೆ 2004ರಲ್ಲಿ ಬಿಜೆಪಿ ತೆಕ್ಕೆಗೆ ಬಂತು. ವಾಜಪೇಯಿ ಅಲೆ, ಯಡಿಯೂರಪ್ಪ ಅಲೆ, ಮೋದಿ ಅಲೆ ಎನ್ನುತ್ತ ಬಿಜೆಪಿ ಹಿಡಿತದಿಂದ ಹೊರಬರಲೇ ಇಲ್ಲ. ಸುರೇಶ ಅಂಗಡಿಯವರೇ 2004ರಿಂದಲೂ ಆಯ್ಕೆಯಾಗುತ್ತಲೇ ಬಂದಿದ್ದರು.

ಈಗ ನಡೆಯಲಿರುವ ಉಪಚುನಾವಣೆಯಲ್ಲಿ ಯಾವುದೇ ಪ್ರಮುಖ ಅಲೆ ಕಾಣಿಸುತ್ತಿಲ್ಲ. ಹಾಗಾಗಿ ಎರಡೂ ಪಕ್ಷಗಳಿಗೆ ಗೆಲ್ಲುವ ಅವಕಾಶ ಅಭ್ಯರ್ಥಿ ಆಯ್ಕೆಯ ಮೇಲೆಯೇ ಇದೆ. ಉತ್ತಮ ಅಭ್ಯರ್ಥಿ ಆಯ್ಕೆಯಿಂದ ಮಾತ್ರ ಗೆಲ್ಲಲು ಸಾಧ್ಯ ಎನ್ನುವ ಸ್ಥಿತಿ ಇದೆ. ಹಾಗಾಗಿ ಎರಡೂ ಪಕ್ಷಗಳು ಅಭ್ಯರ್ಥಿ ಆಯ್ಕೆ ಹೆಚ್ಚಿನ ಗಮನ ನೀಡಿವೆ.

ಕಾಂಗ್ರೆಸ್ ಸಭೆ ನಾಳೆ

ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಆಯ್ಕೆಗಾಗಿ ಎಂ.ಬಿ.ಪಾಟೀಲ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ನೇಮಕ ಮಾಡಿದ್ದು, ಶನಿವಾರ ಸಮಿತಿ ಬೆಳಗಾವಿಗೆ ಆಗಮಿಸಲಿದೆ. ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಲಿರುವ ಸಮಿತಿ ಇಲ್ಲಿನ ಮುಖಂಡರೊಂದಿಗೆ, ಆಕಾಂಕ್ಷಿಗಳೊಂದಿಗೆ ಚರ್ಚಿಸಲಿದೆ.

ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್, ಪ್ರಕಾಶ ಹುಕ್ಕೇರಿ, ಅಶೋಕ ಪಟ್ಟಣ ಮೊದಲಾದವರ ಹೆಸರು ಕೇಳಿಬಂದರೂ ಈ ಯಾರೂ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಯುವ ನಾಯಕ, ಲಕ್ಷ್ಮಿ ಹೆಬ್ಬಾಳಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಹೆಸರು ಸಧ್ಯಕ್ಕೆ ಮುಂಚೂಣಿಗೆ ಬಂದಿದೆ. ಕ್ಷೇತ್ರದ ಎಲ್ಲೆಡೆಯಿಂದ ಕಾರ್ಯಕರ್ತರು ಚನ್ನರಾಜ ಹಟ್ಟಿಹೊಳಿ ಪರವಾಗಿ ಒತ್ತಡ ಹೇರುತ್ತಿದ್ದಾರೆ. ಹಲವಾರು ಮಠಾಧೀಶರೂ ಚನ್ನರಾಜ ಸ್ಪರ್ಧೆಗೆ ಒಲವು ತೋರಿಸುತ್ತಿದ್ದಾರೆ.

ಈ ಹಿಂದೆ ಲಕ್ಷ್ಮಿ ಹೆಬ್ಬಾಳಕರ್ ಅಲ್ಪಮತದಿಂದ ಸೋತಿದ್ದರಿಂದ ಕ್ಷೇತ್ರದಲ್ಲಿ ಅವರ ಹಿಡಿತ ಸಾಕಷ್ಟಿದೆ. ಜೊತೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರ ಸಂಪೂರ್ಣವಾಗಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಮನೆಮಗಳೆಂದೇ ಪರಿಗಣಿಸಿದೆ. ಚನ್ನರಾಜ ಹಟ್ಟಿಹೊಳಿ ಕೂಡ ಸಕ್ಕರೆ ಕಾರ್ಖಾನೆ ಮೂಲಕ ಕ್ಷೇತ್ರದ ಬಹುತೇಕ ಪ್ರದೇಶಗಳಲ್ಲಿ ಚಿರಪರಿಚಿತರಾಗಿದ್ದಾರೆ. ( ಸಮಷ್ಠಿ ಪ್ರಜ್ಞೆಯ ನಾಯಕ ಚನ್ನರಾಜ ಹಟ್ಟಿಹೊಳಿ )

ಶನಿವಾರ ನಡೆಯಲಿರುವ ಕಾಂಗ್ರೆಸ್ ಆಯ್ಕೆ ಸಮಿತಿ ಸಭೆ ಯಾವ ನಿರ್ಣಯ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ.

ಬಿಜೆಪಿಯಿಂದ ಪ್ರಹ್ಲಾದ್ ಜೋಶಿಗೆ ಜವಾಬ್ದಾರಿ

ಭಾರತೀಯ ಜನತಾ ಪಾರ್ಟಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಸರತ್ತು ನಡೆಸಿದೆ. ಸುರೇಶ ಅಂಗಡಿ ಕುಟುಂಬದಲ್ಲೇ ಒಬ್ಬರಿಗೆ ಟಿಕೆಟ್ ನೀಡಬೇಕು. ಅನುಕಂಪದ ಆಧಾರದ ಮೇಲೆ ಗೆಲುವು ಸರಳವಾಗಲಿದೆ ಎನ್ನುವ ತ್ತಡ ಬರುತ್ತಿದೆ. ಆದರೆ ಬಿಜೆಪಿ ಈ ಹಿಂದೆ ಬೆಂಗಳೂರು ಕ್ಷೇತ್ರದಿಂದ ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಪತ್ನಿಗೆ ಟಿಕೆಟ್ ನಿರಾಕರಿಸಿತ್ತು. ಹಾಗಾಗಿ ಸುರೇಶ ಅಂಗಡಿ ಕುಟುಂಬಕ್ಕೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ. ಜೊತೆಗೆ ಅವರ ಕುಟುಂಬದಲ್ಲೂ ಪ್ರಭಲ ಅಭ್ಯರ್ಥಿ ಇಲ್ಲದಿರುವುದು ತೊಡಕಾಗಿದೆ.

ಬಿಜೆಪಿಯಲ್ಲಿ ಹಲವಾರು ಆಕಾಂಕ್ಷಿಗಳಿದ್ದಾರೆ. ಮಾಜಿ ಸಂಸದ ಅಮರಸಿಂಹ ಪಾಟೀಲ, ಚಿಕ್ಕೋಡಿಯ ಮಾಜಿ ಸಂಸದ ರಮೇಶ ಕತ್ತಿ, ರಾಜ್ಯಸಭೆಯ ಮಾಜಿ ಸದಸ್ಯ ಪ್ರಭಾಕರ ಕೋರೆ, ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ, ನ್ಯಾಯವಾದಿ ಎಂ.ಬಿ.ಜಿರಲಿ ಮತ್ತಿತರರ ಹೆಸರು ಆಕಾಂಕ್ಷಿಗಳ ಸಾಲಿನಲ್ಲಿದೆ.

ಯುವ ಮುಖಂಡರಾದ ಸಾಮಾಜಿಕ ಕಾರ್ಯಕರ್ತ ವೀರೇಶ ಕಿವಡಸಣ್ಣವರ್,  ಆಟೊಮೊಬೈಲ್ ಉದ್ಯಮಿ ಮಹಾಂತೇಶ ವಕ್ಕುಂದ, ಹಿಂದುಳಿದ ವರ್ಗಗಳ ವೇದಿಕೆ ರಾಜ್ಯ ಕಾರ್ಯದರ್ಶಿ ಕಿರಣ ಜಾಧವ ಹೆಸರು ಸಹ ಪ್ರಮುಖವಾಗಿ ಕೇಳಿಬರುತ್ತಿದೆ. ಈ ಮೂವರೂ ಸಂಘ ಪರಿವಾರದಿಂದ ಬೆಳೆದುಬಂದವರು. ಸೈಲೆಂಟ್ ಆಗಿ ಪಕ್ಷ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ. ಪ್ರವಾಹ, ಕೊರೋನಾ ಸಂದರ್ಭದಲ್ಲೂ ಅವಿಶ್ರಾಂತವಾಗಿ ಕೆಲಸ ಮಾಡಿದ್ದಾರೆ.

ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವಂತೆ ಪಕ್ಷ ಈಗಾಗಲೆ ಕಾರ್ಯಕರ್ತರಿಗೆ ಸೂಚಿಸಿದೆ. ಜೊತೆಗೆ  ವರದಿ ನೀಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೊಶಿಗೆ ತಿಳಿಸಿದೆ. ಪ್ರಹ್ಲಾದ್ ಜೊಶಿ ಜಿಲ್ಲೆಯ ಮುಖಂಡರ ಜೊತೆ ಚರ್ಚಿಸಿ ಸಲಹೆ ನೀಡಲಿದ್ದಾರೆ.

ಡಿಸೆಂಬರ್ 5ರಂದು ( ಕರ್ನಾಟಕ ಬಂದ್ ಇದ್ದರೆ ದಿನಾಂಕ ಬದಲಾಗಬಹುದು) ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಅಂದು ಅಭ್ಯರ್ಥಿ ಆಯ್ಕೆ ಸಂಬಂಧ ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದೆ.