Kannada NewsKarnataka News

*ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಶ್ರಾವಣ ಮಾಸದ ಪೂಜಾ ಕೈಂಕರ್ಯ ಸಂಪನ್ನ*

ಪ್ರಗತಿವಾಹಿನಿ ಸುದ್ದಿ: ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಸಲಹೆಯಂತೆ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಕೈಕೊಂಡಿದ್ದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನದ ಮಂಗಲದ ಅಂಗವಾಗಿ ರವಿವಾರ ಭಕ್ತರಿಂದ ಶ್ರೀಗಳ ಇಷ್ಟಲಿಂಗಕ್ಕೆ ಭಕ್ತಿಯ ಸಹಸ್ರ ಬಿಲ್ವಾರ್ಚನೆ ನಡೆಯಿತು.

ಪ್ರಾತಃಕಾಲ 8 ಗಂಟೆಗೆ ಆರಂಭಗೊಂಡ ಏಕಾದಶ ರುದ್ರಾಭಿಷೇಕ ಮಹಾಪೂಜೆಯ ನಂತರ ಜರುಗಿದ ಈ ಸಹಸ್ರ ಬಿಲ್ವಾರ್ಚನೆ ಕಾರ್ಯದಲ್ಲಿ ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಹಾರೋಬೆಳವಡಿ, ಕೌಲಗೇರಿ, ಚಂದನಮಟ್ಟಿ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರದ ಭಕ್ತಗಣ ಸಹಸ್ರ ಬಿಲ್ವಾರ್ಚನೆಯಲ್ಲಿ ಪಾಲ್ಗೊಂಡು ತಾವು ತಂದಿದ್ದ ಬಿಲ್ವಪತ್ರಿಯ ದಳಗಳನ್ನು ಶಿವಸಹಸ್ರ ನಾಮಾವಳಿಯ ಪಠಣದೊಂದಿಗೆ ಸಮರ್ಪಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

 ಇಷ್ಟಲಿಂಗ ದೀಕ್ಷೆ : ಶ್ರಾವಣದ ಒಂದು ತಿಂಗಳಕಾಲ ನಿತ್ಯ ಮುಂಜಾನೆ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ನಡೆಸಿದ ಇಷ್ಟಲಿಂಗ ಮಹಾಪೂಜಾ ಸಂದರ್ಭದಲ್ಲಿ ಭಕ್ತ ಸಂಕುಲಕ್ಕೆ ಇಷ್ಟಲಿಂಗಾರ್ಚನೆಯ ಮಹತ್ವವನ್ನು ತಿಳಿಸಿ, “ವೀರಶೈವ-ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗವು ಅರುಹಿನ ಕುರುಹು. ಇಷ್ಟಲಿಂಗವು ಮನಸ್ಸಿನ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಯನ್ನು ಹೊಂದಿದೆ. ಶ್ರೀಗುರುವಿನ ಅನುಗ್ರಹದ ಮೂಲಕ ಪ್ರಾಪ್ತವಾಗುವ ಇಷ್ಟಲಿಂಗವನ್ನು ಸದಾ ದೇಹದ ಮೇಲೆಯೇ ಧಾರಣೆ ಮಾಡಬೇಕು. ಸಾಕ್ಷಾತ್ ಶಿವನೇ ಇಷ್ಟಲಿಂಗ ರೂಪದಲ್ಲಿ ಗುರುಕಾರುಣ್ಯದ ನೆಲೆಯಲ್ಲಿ ಕರಸ್ಥಲದ ಸಾನ್ನಿಧ್ಯಕ್ಕೆ ಕಾಣಸಿಗುತ್ತಾನೆ. ಇಷ್ಟಲಿಂಗದ ಮೂಲಕವೇ ಪ್ರಾಣಲಿಂಗ ಮತ್ತು ಭಾವಲಿಂಗಗಳ ಅನುಸಂಧಾನ ಸಾಧ್ಯವಾಗುತ್ತದೆ”ಎಂಬ ತಿಳಿವಳಿಕೆ ನೀಡಿದರು. ಜೊತೆಗೆ ಈ ಶ್ರಾವಣ ಸಂದರ್ಭದಲ್ಲಿ ಒಟ್ಟು 57 ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಿದರು.

 ನಿತ್ಯ ದಾಸೋಹ: ಒಂದು ತಿಂಗಳಕಾಲ ನಿತ್ಯದಲ್ಲಿ ಶ್ರೀಗಳ ಇಷ್ಟಲಿಂಗ ಮಹಾಪೂಜೆಯ ನಂತರ ಪೂಜೆಯಲ್ಲಿ ಪಾಲ್ಗೊಂಡ ಭಕ್ತರಿಗೆ ದಾಸೋಹ ಸೇವೆಯಲ್ಲಿ ಮಹಾಪ್ರಸಾದ ವಿತರಣೆ ಜರುಗಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button