*ಏಷ್ಯನ್ ಗೇಮ್ಸ್ ಚಿನ್ನದ ಬಳಿಕ ತಾಯ್ನಾಡಿಗೆ ಪೂವಮ್ಮ*: *ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ*

ಪ್ರಗತಿವಾಹಿನಿ ಸುದ್ದಿ: ಏಷ್ಯನ್ ಗೇಮ್ಸ್‌ನ 4×400 ಮೀಟರ್ ಮಹಿಳಾ ರಿಲೇಯಲ್ಲಿ ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ ಕರಾವಳಿಯ ಅಥ್ಲೀಟ್ ಎಂ.ಆರ್. ಪೂವಮ್ಮ ತಾಯ್ನಾಡಿಗೆ ಮರಳಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪೂವಮ್ಮಗೆ ಕ್ರೀಡಾಭಿಮಾನಿಗಳು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಅದ್ಧೂರಿ ಸ್ವಾಗತ ಕೋರಿದರು.
ವಿಮಾನ ನಿಲ್ದಾಣದ ಆಗಮನ ದ್ವಾರದಲ್ಲಿ ಅಭಿಮಾನಿಗಳು, ಬಂಧು-ಮಿತ್ರರು ಹಾಗೂ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಶಾಲು ಹೊದಿಸಿ, ಬೃಹತ್ ಹಾರ ಹಾಕಿ, ಫಲ-ತಾಂಬೂಲ ಹಾಗೂ ಹೂಗುಚ್ಛ ನೀಡಿ ಪೂವಮ್ಮ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಯುವಕರು ಹಾಗೂ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಕೂಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಹೂಗುಚ್ಛ ನೀಡಿ ಅಭಿನಂದಿಸಿದರು. ವಿವಿಧ ರಾಜಕೀಯ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕ್ರೀಡಾ ಕ್ಷೇತ್ರದ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.
ಸ್ವಾಗತ ಸ್ವೀಕರಿಸಿದ ಬಳಿಕ ಮಾತನಾಡಿದ ಪೂವಮ್ಮ, ಮೂರು ಏಷ್ಯನ್ ಗೇಮ್ಸ್‌ಗಳಲ್ಲಿ ತಾವು ಗೆದ್ದಿರುವ ಆರನೇ ಪದಕ ಇದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಬಾರಿ 4×400 ಮೀಟರ್ ಮಹಿಳಾ ರಿಲೇ ತಂಡ ಚಿನ್ನದ ಪದಕ ಗೆದ್ದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಏಷ್ಯನ್ ಗೇಮ್ಸ್ ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದ ಕ್ಷಣವನ್ನು ನೆನಪಿಸಿಕೊಂಡ ಪೂವಮ್ಮ, ಆ ಅನುಭವ ತುಂಬಾ ಹೆಮ್ಮೆ ಮೂಡಿಸಿತು ಎಂದು ತಿಳಿಸಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿ ದೇಶಕ್ಕೆ ಮತ್ತೊಂದು ಪದಕ ತಂದುಕೊಟ್ಟಿರುವುದಕ್ಕೆ ಸಂತಸವಿದೆ ಎಂದರು.
ಇದೇ ವೇಳೆ ಕರ್ನಾಟಕದಲ್ಲಿ ಕ್ರೀಡಾಪಟುಗಳಿಗೆ ನೀಡುವ ನಗದು ಬಹುಮಾನ ಹೆಚ್ಚಿಸಬೇಕು ಎಂಬ ಮನವಿಯನ್ನೂ ಸರ್ಕಾರದ ಮುಂದಿಟ್ಟರು. ಇತರ ರಾಜ್ಯಗಳಲ್ಲಿ ಚಿನ್ನದ ಪದಕ ವಿಜೇತರಿಗೆ ಹೆಚ್ಚಿನ ಬಹುಮಾನ ನೀಡಲಾಗುತ್ತಿದ್ದು, ಕರ್ನಾಟಕದಲ್ಲಿ ನೀಡಲಾಗುವ ಮೊತ್ತವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ತಿಳಿಸಿದರು.
ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಜಿ.ಪರಮೇಶ್ವರ್ ಕರೆ ಮಾಡಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ನೀಡುವ ನಗದು ಬಹುಮಾನ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಪೂವಮ್ಮ ತಿಳಿಸಿದರು.
22–23 ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಪಟ್ಟಿರುವುದನ್ನು ನೆನಪಿಸಿಕೊಂಡ ಪೂವಮ್ಮ, ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕಕ್ಕೆ ದೊರೆತ ಮೊದಲ ಚಿನ್ನದ ಪದಕ ಇದಾಗಿದೆ. ಕ್ರೀಡಾಪಟುಗಳಿಗೆ ನಗದು ಬಹುಮಾನ ಮಾತ್ರವಲ್ಲದೆ ಉತ್ತಮ ಕ್ರೀಡಾ ಸೌಲಭ್ಯಗಳನ್ನೂ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಮುಂದಿನ ಯೋಜನೆಗಳ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದ ಪೂವಮ್ಮ, ಸದ್ಯಕ್ಕೆ ಈ ಗೆಲುವಿನ ಕ್ಷಣವನ್ನು ಆನಂದಿಸುತ್ತಿರುವುದಾಗಿ ಹೇಳಿದರು. ತಂದೆ-ತಾಯಿ, ಪತಿ ಹಾಗೂ ಕೋಚ್‌ಗಳ ಬೆಂಬಲವೇ ಸಾಧನೆಗೆ ಪ್ರಮುಖ ಕಾರಣ ಎಂದು ಹೇಳಿ, ಸ್ವಾಗತಿಸಲು ಆಗಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೂಡ ಪೂವಮ್ಮ ಸಾಧನೆಯನ್ನು ಅಭಿನಂದಿಸಿದ್ದಾರೆ. ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಚಿನ್ನ ಹಾಗೂ ಮಿಶ್ರ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿರುವುದು ಹೆಮ್ಮೆಯ ಸಾಧನೆ ಎಂದು ತಿಳಿಸಿ, ಯುವಜನರಿಗೆ ಪೂವಮ್ಮ ಮಾದರಿಯಾಗಲಿ ಎಂದು ಹಾರೈಸಿದ್ದಾರೆ.
*ಇಂದು ಕ್ರೀಡಾಭಿಮಾನಿಗಳಿಗೆ ಹಬ್ಬ*: *ಒಂದೇ ದಿನ ಭಾರತಕ್ಕೆ 4 ಬಿಗ್ ಪಂದ್ಯಗಳು* – Pragati Vahini
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




