Kannada NewsLatest

ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿ ವಿಚಾರ; ಬೆಳಗಾವಿ, ಕಲ್ಬುರ್ಗಿ ನಿರ್ಲಕ್ಷ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗ್ರುಪ್ ‘ಬಿ’ ದೈಹಿಕ ಶಿಕ್ಷಣ ಪರಿವೀಕ್ಷಕರ ತತ್ಸಮಾನ ವೃಂದದ ಹುದ್ದೆಗಳಿಗೆ ಬಡ್ತಿ ವಿಚಾರದಲ್ಲಿ ಕೇವಲ ಬೆಂಗಳೂರು ಮತ್ತು ಮೈಸೂರು ಪ್ರಾಧಿಕಾರವನ್ನಾಗಿ ಮಾಡಿ ಉಳಿದ ಬೆಳಗಾವಿ ಮತ್ತು ಕಲಬುರ್ಗಿ ವಿಭಾಗಗಳನ್ನು ಕೈಬಿಟ್ಟಿರುವುದಕ್ಕೆ ವಿಧಾನಸ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸರಕಾರದ ಅಧಿಸೂಚನೆಯನ್ನು ಉಲ್ಲಂಘಿಸಿದೆ ಎಂದು ಕಿಡಿಕಾರಿದ್ದಾರೆ.

2008 ರಿಂದ 2016 ರವರೆಗೆ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರುಗಳಿಗೆ ಅನ್ಯಾಯವಾಗಿರುತ್ತದೆ. ಉಲ್ಲೇಖ (1) ರ ಸರಕಾರದ ಅಧಿಸೂಚನೆ ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಗ್ರುಪ್ ‘ಬಿ’ ದೈಹಿಕ ಶಿಕ್ಷಣ ಪರಿವೀಕ್ಷಕರ ತತ್ಸಮಾನ ವೃಂದದ ಹುದ್ದೆಗಳಿಗೆ ಶಿಕ್ಷಣ ಇಲಾಖೆ ಆಯುಕ್ತರು ನೇಮಕಾತಿ ಪ್ರಾಧಿಕಾರ ನಿಗದಿಪಡಿಸಿದ್ದಾರೆ. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ ಮತ್ತು ಕಲಬುರ್ಗಿ ಆಯುಕ್ತಾಲಯಗಳಿಗೆ ಸಂಬಂಧಿಸಿದಂತೆ ಸದರಿ ವೃಂದದ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರ ನಿಗದಿಪಡಿಸಿಲ್ಲ. ಈ ಬಗ್ಗೆ ಇಲಾಖೆಯಿಂದ ಸರಕಾರಕ್ಕೆ ಪತ್ರ ಬರೆಯಬೇಕು. ಆದರೆ ಸರಕಾರದಿಂದ ಈ ವಿಷಯದ ಬಗ್ಗೆ ಮುಂದಿನ ಆದೇಶ ನೀಡುವವರೆಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರುಪ್ ‘ಬಿ’ ದೈಹಿಕ ಶಿಕ್ಷಣ ಪರಿವೀಕ್ಷಕರು ತತ್ಸಮಾನ ಹುದ್ದೆಗಳಿಗೆ ಉಲ್ಲೇಖ (1) ರಂತೆ ಉಲ್ಲೇಖ (2) ಮತ್ತು (3) ರಲ್ಲಿ ಪ್ರಕಟಿಸಿದ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯನ್ನು ರದ್ದುಪಡಿಸಿ ಬಡ್ತಿ ನೀಡುವ ಪ್ರಕ್ರಿಯೆಯನ್ನು ಸರಕಾರದ ಅಧಿಸೂಚನೆಯಂತೆ ವಿಭಾಗ ಮಟ್ಟದಲ್ಲಿ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿ ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ವೃಂದಕ್ಕೆ ನೀಡುತ್ತಿರುವ ವಿಧಾನದಲ್ಲಿ ಬಡ್ತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಗ್ರುಪ್ ‘ಬಿ’ ವೃಂದದ ತತ್ಸಮಾನ ಹುದ್ದೆಗಳಿಗೆ ಬಡ್ತಿ ನೀಡಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಅಲ್ಲದೇ ಸರಕಾರವು ಜೂನ್ 7ರವರೆಗೆ ಲಾಕ್‍ಡೌನ್ ಅವಧಿಯನ್ನು ವಿಸ್ತರಿಸಿದ್ದು, ಶಿಕ್ಷಕರಿಗೆ ಆಕ್ಷೇಪಣೆ ಸಲ್ಲಿಸಲು ಬೇಕಾಗುವ ದಾಖಲೆಗಳು ಶಾಲಾ ಮುಖ್ಯಸ್ಥರ ಸಹಿ ದೃಢೀಕರಣ ಜೆರಾಕ್ಸ್ ಅಂಗಡಿಗೆ ಹೋಗಿ ಬರಲು ವಾಹನದ ಸಮಸ್ಯೆ (ರಜೆ) ಒಂದು ಕಡೆ ಸರ್ಕಾರದ ಲಾಕ್‍ಡೌನ್ ಅವಧಿಯಲ್ಲಿ ಕೋವಿಡ್ ನಿಯಮಗಳನ್ನು ಪ್ರಜ್ಞಾವಂತ ಶಿಕ್ಷಕರು ಪಾಲಿಸಲೇಬೇಕು. ಹೀಗಿದ್ದಾಗ ಕೇವಲ 3 ದಿನಗಳಲ್ಲಿ ಅತೀ ತರಾತುರಿಯಲ್ಲಿ ಆಕ್ಷೇಪಣೆ ಸಲ್ಲಿಸುವುದು ಅಸಾಧ್ಯ.

ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಬಸವಕಲ್ಯಾಣ ಮತ್ತು ಮಸ್ಕಿ ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಭಾಗವಹಿಸಿದ ಶಿಕ್ಷಕರು ಕೋವಿಡ್‍ನಿಂದ ಬಳಲುತ್ತಿದ್ದು ಅನೇಕ ಶಿಕ್ಷಕರು ಕ್ವಾರಂಟೈನ್‍ದಲ್ಲಿರುತ್ತಾರೆ. ಹೀಗಾಗಿ ಯಾವುದೇ ಆನ್‍ಲೈನ್ ಕೌನ್ಸಿಲಿಂಗ್‍ನಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಇನ್ನು ನೇರವಾದ ಕೌನ್ಸಿಲಿಂಗ್ ಇಟ್ಟರೂ ಬೆಂಗಳೂರಿಗೆ ಹೋಗಲು ಲಾಕ್‍ಡೌನ್ ಇರುವುದು ಹಾಗೂ 2019-20 ನೇ ಸಾಲಿನ ಕಾರ್ಯನಿರ್ವಹಣಾ ವರದಿಗಳನ್ನು ಮಾತ್ರ ಸಲ್ಲಿಸಿದ್ದು 2020-21ನೇ ಸಾಲಿನ ಕಾರ್ಯ ನಿರ್ವಹಣಾ ವರದಿಗಳನ್ನು ಸಲ್ಲಿಸಿರುವುದಿಲ್ಲ. ಇದಕ್ಕೆ ಮುಖ್ಯೋಪಾಧ್ಯಾಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರ ಸಹಿ ಮತ್ತು ದೃಢೀಕರಣಕ್ಕಾಗಿ ಶಿಕ್ಷಕರು ಅಲೆದಾಡಬೇಕಾಗುವುದು. ಅನೇಕ ಶಿಕ್ಷಕರು ರಜಾ ಅವಧಿಯಲ್ಲಿ ತಮ್ಮ ತಮ್ಮ ಊರುಗಳಿಗೆ ಹೋಗಿದ್ದು ಈ ಲಾಕ್‍ಡೌನ್ ಅವಧಿಯಲ್ಲಿ ಇದೆಲ್ಲವೂ ಅಸಾಧ್ಯ. ಹಾಗಾಗಿ ದಿನಾಂಕ: 24-05-2021 ರ ಆಕ್ಷೇಪಣೆ ಕೊಡುವ ಸಮಯವನ್ನು ಮುಂದೂಡಿ ಲಾಕ್‍ಡೌನ್ ಅವಧಿ ಮುಗಿದ ನಂತರ ದಿನಾಂಕ ಮತ್ತೊಮ್ಮೆ ಮರುನಿಗದಿ ಮಾಡಬೇಕು ಹಾಗೂ ಉಲ್ಲೇಖ (1) ಸರಕಾರದ ಅಧಿಸೂಚನೆಯಂತೆ ನಿಯಮಾನುಸಾರವಾಗಿ ಬಡ್ತಿ ಪ್ರಕ್ರಿಯೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button