



ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಪರಮ ಪವಿತ್ರವಾದದ್ದು. ಇಷ್ಟು ವರ್ಷ ಇಂತಹ ಪುಣ್ಯದ ಕೆಲಸ ನಿರ್ವಹಿಸಿ ನಿವೃತ್ತರಾದವರ ಸೇವೆ ಮುಂದೆಯೂ ಸಮಾಜಕ್ಕೆ ಸಿಗುವಂತಾಗಲಿ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಿಜಗರಣಿ ಗ್ರಾಮದ ನ್ಯೂ ಇಂಗ್ಲಿಷ್ ಮಿಡಿಯಮ್ ಸ್ಕೂಲ್ ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಶಿಕ್ಷಕರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಬಡತನ ಅವರ ಭವಿಷ್ಯಕ್ಕೆ ಅಡ್ಡಿಯಾಗಬಾರದು. ಅದಕ್ಕಾಗಿ ಲಕ್ಷ್ಮೀ ತಾಯಿ ಫೌಂಡೇಶನ್ ನಿಂದ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಈ ದಿಸೆಯಲ್ಲಿ ಸಾರ್ವಜನಿಕರೂ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೆಬ್ಬಾಳಕರ್ ವಿನಂತಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ನಿವೃತ್ತರಾಗುತ್ತಿರುವ ಶಿಕ್ಷಕರು ತಮ್ಮ ಸುದೀರ್ಘ ಅನುಭವವನ್ನು ವ್ಯರ್ತವಾಗಿಸದೆ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳಿಗೆ ಅಗತ್ಯವಾದ ತರಬೇತಿ ನೀಡಲು ಮುಂದೆ ಬರಬೇಕು. ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದ್ದಾರೆ ಎಂದು ಹೇಳಿದರು.
ಮನೋಹರ ಬೆಳಗಾಂವ್ಕರ್, ಪುಂಡಲೀಕ್ ಜಾಧವ್, ಪರುಶರಾಮ ಬಾಸ್ಕಳ, ಸಾತೇರಿ ಜಾಧವ್, ಅರ್ಜುನ ನೀಲಜಕರ್, ಗುಂಡು ಬಾಸ್ಕಳ, ಯಲ್ಲಪ್ಪ ಬೆಳಗಾಂವ್ಕರ, ಧನಾಜಿ ಕಾಂಬಳೆ, ನಾಮದೇವ್ ಮೋರೆ, ಕಲ್ಲಪ್ಪ ಅಷ್ಟೇಕರ್, ಅಬ್ದುಲ್ ನಾವ್ಗೆಕರ್, ವೈ ಎಚ್ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ