Kannada NewsKarnataka NewsLatest

ಪ್ರಭಾ ಶುಗರ್ಸ್ ಋಣ ನನ್ನ ಮೇಲಿದೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ : ನನಗೆ ರಾಜಕೀಯ ಭದ್ರ ಬುನಾದಿ ಒದಗಿಸಿದ್ದೇ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ. ಹೀಗಾಗಿ ಕಾರ್ಖಾನೆಯ ಋಣ ನನ್ನ ಮೇಲಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿಗೆ ಸಮೀಪದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅತಿಥಿ ಗೃಹದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ನೀಡಿರುವ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು, ಈ ಕಾರ್ಖಾನೆಯು ರೈತರ ಜೀವನಾಡಿಯಾಗಿದೆ ಎಂದು ಹೇಳಿದರು.
೧೯೯೨ ಸೆಪ್ಟೆಂಬರ್ ತಿಂಗಳಲ್ಲಿ ಕಾರ್ಖಾನೆಯ ಅಧ್ಯಕ್ಷನಾಗುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಪ್ರವೇಶ ಮಾಡಿದೆ. ೧೨ ವರ್ಷಗಳ ಕಾಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದೆ. ಆ ಸಂದರ್ಭದಲ್ಲಿ ನನಗೆ ರೈತರ ಪರಿಚಯವಾಗಿ ಸಾರ್ವಜನಿಕ ಜೀವನಕ್ಕೆ ಅಡಿಪಾಯವಾಯಿತು. ೨೦೦೪ ರಲ್ಲಿ ಮೊದಲ ಬಾರಿಗೆ ಅರಭಾವಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿ ಜನಸೇವೆ ಮಾಡಲು ಅನುಕೂಲವಾಯಿತು. ಇದಕ್ಕೆಲ್ಲ ಕ್ಷೇತ್ರದ ಜನರು ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸವೇ ಕಾರಣವಾಗಿದೆ ಎಂದು ಹೇಳಿದರು.

ನಮ್ಮ ಕಾರ್ಖಾನೆಯ ಜೊತೆಗೆ ಪ್ರಾರಂಭವಾಗಿದ್ದ ರಾಜ್ಯದ ೫-೧೦ ಹಾಗೂ ನೆರೆಯ ಮಹಾರಾಷ್ಟ್ರದ ೨೫-೩೦ ಸಕ್ಕರೆ ಕಾರ್ಖಾನೆಗಳು ಹಲವಾರು ಸಮಸ್ಯೆಗಳಿಂದ ಮುಚ್ಚಿವೆ. ಆದರೆ ನಮ್ಮ ಕಾರ್ಖಾನೆಗೆ ಎಷ್ಟೇ ಕಷ್ಟಗಳು ಎದುರಾದರೂ ಕಳೆದ ೩೦ ವರ್ಷಗಳಿಂದ ಕಾರ್ಖಾನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಇಷ್ಟಾಗಿಯೂ ಪ್ರತಿ ಚುನಾವಣೆಗೊಮ್ಮೆ ನಮ್ಮ ವಿರೋಧಿಗಳು ಕಾರ್ಖಾನೆ ಬಗ್ಗೆ ಅಪಪ್ರಚಾರ ಮಾಡುತ್ತಲೇ ಇರುತ್ತಾರೆ.

ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿರುವ ರೈತರ ಎಲ್ಲ ಬಿಲ್ಲನ್ನು ನೀಡಿದ್ದೇವೆ. ಕಾರ್ಮಿಕರ ಹಿತವನ್ನು ಕಾಪಾಡುತ್ತಿದ್ದೇವೆ. ಮಾಸಿಕ ವೇತನವನ್ನು ಪಾವತಿಸುತ್ತಿದ್ದೇವೆ. ಪ್ರತಿವರ್ಷ ದೀಪಾವಳಿಗೊಮ್ಮೆ ಬೋನಸ್ ನೀಡುತ್ತಿದ್ದೇವೆ. ನಾವು ಯಾರಿಗೂ ಅನ್ಯಾಯ ಮಾಡಿರುವುದಿಲ್ಲ. ಇನ್ನಾದರೂ ವಿರೋಧಿಗಳು ಕಾರ್ಖಾನೆ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಯಾರಾದರೂ ರೈತರ ವಿಚಾರದಲ್ಲಿ ರಾಜಕೀಯ ಮಾಡಿದರೇ ಸುಮ್ಮನಿರುವುದಿಲ್ಲ ಎಂದು ಅವರು ಹೇಳಿದರು.

ಜನರ ಆಶೀರ್ವಾದದಿಂದ ಕೆಎಂಎಫ್‌ಗೆ ಅಧ್ಯಕ್ಷನಾಗಿ ಆಯ್ಕೆಯಾಗಿರುವೆ. ಇದರಿಂದ ರೈತರ ಸೇವೆ ಮಾಡಲು ಮತ್ತಷ್ಟು ಅನುಕೂಲವಾಗಿದೆ. ಉತ್ತರ ಕರ್ನಾಟಕದ ೪ ಒಕ್ಕೂಟಗಳು ಸೇರಿ ಒಟ್ಟು ೧೪ ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ದಕ್ಷಿಣ ಕರ್ನಾಟಕದಲ್ಲಿ ಹಾಲು ಒಕ್ಕೂಟಗಳು ಪ್ರಬಲವಾಗಿ ಬೆಳೆದಿವೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹಾಲಿನ ಒಕ್ಕೂಟಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವುದಾಗಿ ಅವರು ಹೇಳಿದರು.

ಅಗಸ್ಟ್ ತಿಂಗಳಲ್ಲಿ ಪ್ರವಾಹ ಹಾಗೂ ನಿರಂತರ ಮಳೆಯಿಂದ ನದಿ ತೀರದ ರೈತರ ಜಮೀನುಗಳಲ್ಲಿ ಕಬ್ಬು ಹಾನಿಯಾಗಿದೆ. ಅಂತಹ ಕಬ್ಬನ್ನು ತೆಗೆದುಕೊಳ್ಳುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಕಾರ್ಖಾನೆಯು ಅಂತಹ ಕಬ್ಬನ್ನು ಪಡೆದುಕೊಂಡು ದರವೊಂದನ್ನು ನಿಗದಿಪಡಿಸುವಂತೆ ಸೂಚನೆ ನೀಡಿದರು.
ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ, ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ನಿರ್ದೇಶಕರಾದ ಬಸಗೌಡ ಪಾಟೀಲ, ಕೃಷ್ಣಪ್ಪ ಬಂಡ್ರೊಳ್ಳಿ, ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗ ಪೂಜೇರಿ, ಕೆಂಚಗೌಡ ಪಾಟೀಲ, ಗಿರೀಶ ಹಳ್ಳೂರ, ಮಹಾದೇವಪ್ಪ ಭೋವಿ, ಭೂತಪ್ಪ ಗೊಡೇರ, ಮಾಳಪ್ಪ ಜಾಗನೂರ, ಮಲ್ಲಿಕಾರ್ಜುನ ಕಬ್ಬೂರ, ಶಿದ್ಲಿಂಗ ಕಂಬಳಿ, ಯಲ್ಲವ್ವ ಸಾರಾಪೂರ, ಲಕ್ಕವ್ವ ಬೆಳಗಲಿ, ಪರಿಣಿತ ಸಮಿತಿಯ ಸದಸ್ಯರಾದ ವರ್ತಕ ವಿಕ್ರಮ ಅಂಗಡಿ, ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ಗೋಕಾಕ ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ವ್ಯವಸ್ಥಾಪಕ ನಿರ್ದೆಶಕ ಬಿ.ಎಸ್. ಮಂಟೂರ, ಸಿಡಿಓ ಜೆ.ಆರ್. ಬಬಲೇಶ್ವರ, ಅವರು ಉಪಸ್ಥಿತರಿದ್ದರು.

 

ನಿಮ್ಮ ಪ್ರೀತಿಯ ಪ್ರಗತಿವಾಹಿನಿಗೆ ವಾರ್ಷಿಕೋತ್ಸವದ ಸಂಭ್ರಮ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button