ಕೆಎಲ್ಇ ಆಸ್ಪತ್ರೆ – ಪ್ರಕಾಶ ಹುಕ್ಕೇರಿ ಸಹಯೋಗದಲ್ಲಿ ಕೋವಿಡ್ ಕೇರ್ ಸೆಂಟರ್
ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಬಹುಕಾಲದ ವೈರಿಗಳಾದ ಪ್ರಭಾಕರ ಕೋರೆ ಮತ್ತು ಪ್ರಕಾಶ ಹುಕ್ಕೇರಿ ಪರಸ್ಪರ ಕೈಜೊಡಿಸಿದ್ದಾರೆ. ಜನರ ಸಂಕಷ್ಟ ಕಾಲದಲ್ಲಿ ಇಬ್ಬರು ನಾಯಕರು ಒಂದಾಗಿ ನೆರವಿಗೆ ನಿಂತಿದ್ದಾರೆ.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯರಾದ ಡಾಕ್ಟರ್ ಪ್ರಭಾಕರ್ ಕೋರೆ ನೇತೃತ್ವದ ಕೆಎಇ ಆಸ್ಪತ್ರೆ ಹಾಗೂ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಇವರ ಸಹಯೋಗದಿಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೨೦ ಹಾಸಿಗೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.
ಅಂಕಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೈಲಜಾ ಪಾಟೀಲ್ ಇಂದು ಸೆಂಟರ್ ಉದ್ಘಾಟಿಸಿದರು.
ಈ ಕಾರ್ಯಕ್ರಮಕ್ಕೆ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಮಲ್ಲಿಕಾರ್ಜುನ್ ಕೋರೆ, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ, ಅಂಕಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಸುರೇಶ್ ಪಾಟೀಲ್, ತುಕಾರಾಮ ಪಾಟೀಲ್, ಕೃಷ್ಣ ಕಿಲ್ಲೇಕತ, ವಿಕಾಸ್ ಪಾಟೀಲ್, ವಿವೇಕ ಕಮತೆ, ಸತೀಶ್ ಕೋರೆ, ರಣಜಿತ್ ಸಿರ್‌ಶೆಟ್, ವಿಕ್ರಂ ಸಿರಶೆಟ್ ಇನ್ನಿತರರು ಹಾಜರಿದ್ದರು.
ಈ ವೇಳೆ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ-ಸದಲಗಾ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜನರ ಆರೋಗ್ಯಕ್ಕಾಗಿ ರಾಜ್ಯಸಭೆಯ ಮಾಜಿ ಸದಸ್ಯ ಪ್ರಭಾಕರ ಕೋರೆ ಹಾಗೂ ಕೆಎಲ್ಇ ಸಂಸ್ಥೆಯ ವೈದ್ಯಕೀಯ ಸಿಬ್ಬಂದಿಯ ಜೊತೆಗೂಡಿ ಅಂಕಲಿ ಗ್ರಾಮದಲ್ಲಿ ಕೊವಿಡ್ ಸೆಂಟರ್ ಪ್ರಾರಂಭಿಸಲಾಗಿದೆ. ಜನರು ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಹೇಳಿದರು.
ಈ ವೇಳೆ ಅಂಕಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ನಾಗರಿಕರು ಇದ್ದರು. ಅಂಕಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿಗಳಾದ ಡಾಕ್ಟರ್ ಮಹೇಶ್ ಕುಂಭಾರ್ ಸ್ವಾಗತಿಸಿ, ವಂದಿಸಿದರು.
ಸರಕಾರಿ ಆಸ್ಪತ್ರೆ ಕಟ್ಟಡದಲ್ಲಿ ಕೇರ್ ಸೆಂಟರ್ ನಡೆಸಲು ಸರಕಾರಿ ಉಪಕರಣಗಳನ್ನು ಬಳಸಲಾಗುತ್ತದೆ. ಸಿಬ್ಬಂದಿಯನ್ನು ಪ್ರಭಾಕರ ಕೋರೆ ಒದಗಿಸಲಿದ್ದು, ಪ್ರಕಾಶ ಹುಕ್ಕೇರಿ ಸಿಬ್ಬಂದಿ ವೇತನ ಮತ್ತಿತರ ಖರ್ಚು ವೆಚ್ಚ ಭರಿಸಲಿದ್ದಾರೆ. ಪ್ರಭಾಕರ ಕೋರೆ ಮತ್ತು ಪ್ರಕಾಶ ಹುಕ್ಕೇರಿ ಪರಸ್ಪರ ಮಾತನಾಡಿಕೊಂಡು ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ.
ಶುಭ ಸುದ್ದಿ: ಹೊಸ ಸೋಂಕಿತರ ಸಂಖ್ಯೆಗಿಂತ ಡಿಸ್ಚಾರ್ಜ್ ಜಾಸ್ತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ