*ಸಮಾಜದ ಧ್ರುವತಾರೆ ಡಾ.ಶಾಮನೂರು ಶಿವಶಂಕರಪ್ಪ: ಡಾ.ಪ್ರಭಾಕರ ಕೋರೆ ಸಂತಾಪ*

ಪ್ರಗತಿವಾಹಿನಿ ಸುದ್ದಿ: ದಾವಣಗೆರೆಯನ್ನು ವಿಶ್ವದ ಭೂಪಟದ ಮೇಲೆ ಗುರುತಿಸುವಂತೆ ಮಾಡಿದ ಮುತ್ಸದ್ದಿ ರಾಜಕಾರಣಿ ಡಾ. ಶಾಮನೂರು ಶಿವಶಂಕರಪ್ಪನವರು ನಿಜಕ್ಕೂ ಅಜಾತಶತ್ರುವಾಗಿದ್ದರು. ಅವರದು ಮಾಗಿದ ವ್ಯಕ್ತಿತ್ವ. ಕೇವಲ ಸಂಪತ್ತಿನಲ್ಲಿ ಮಾತ್ರ ಶ್ರೀಮಂತರಲ್ಲ, ಹೃದಯ ಶ್ರೀಮಂತಿಕೆಯೂ ದೊಡ್ಡದಾಗಿತ್ತು ಎಂದು ಕೆ ಎಲ್ ಇ ಮುಖ್ಯಸ್ಥ, ವೀರಶೈವ ಲಿಂಗಾಯಿತ ಮಹಾಸಭಾ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ ಸ್ಮರಿಸಿದ್ದಾರೆ.
ದುಡಿಮೆ-ದಾಸೋಹಗಳನ್ನು ಮೈಗೂಡಿಸಿಕೊಂಡಿದ್ದ ಅವರು ಬದುಕಿನುದ್ದಕ್ಕೂ ಜ್ಯಾತ್ಯತೀತ ಗುಣಗಳನ್ನು ಮೈಗೂಡಿಸಿಕೊಂಡು ಶೋಷಿತ ಸಮುದಾಯಗಳ ಸೇವೆ ಮಾಡುತ್ತಾ ಬಂದರು. ಯಾವುದೇ ಸಮುದಾಯವನ್ನು ನಿರ್ಲಕ್ಷಿಸಿಲ್ಲ. ಅವರೆಂದೂ ಬೇಡಿ ಬಂದವರಿಗೆ ಕೊಟ್ಟು ದಣಿಯಲಿಲ್ಲ. ಅವರು ದಾನಮಾಡಿ ಖುಷಿ ಪಟ್ಟರು. ಕರ್ನಾಟಕದ ಉದ್ದಗಲಕ್ಕೂ ಅವರು ಉದಾರವಾದ ಸಾಮಾಜಿಕ ಧಾರ್ಮಿಕ ಕೊಡುಗೆಗಳನ್ನು ನೀಡಿ ತಮ್ಮ ಸಂಪತ್ತನ್ನು ಸಮಾಜಕ್ಕೆ ನೀಡಿ ಕೃತಾರ್ಥರಾದರು. ಸಮಾಜದಿಂದ ಗಳಿಸಿದ ಅಪಾರ ಸಂಪತ್ತನ್ನು ಸಮಾಜದ ಯೋಗಕ್ಷೇಮಕ್ಕಾಗಿ ವ್ಯಯಿಸಿರುವ ಡಾ. ಶಾಮನೂರು ಶಿವಶಂಕರಪ್ಪನವರು ನಮ್ಮ ಕಾಲಮಾನದ ಅರಟಾಳ ರುದ್ರಗೌಡರೇ ಆಗಿದ್ದಾರೆ.
ಶಾಮನೂರು ಅವರದ್ದು ಸಮಗ್ರತೆಯ ವ್ಯಕ್ತಿತ್ವವಾಗಿತ್ತು. ಯುವಕರು ನಾಚುವಂತೆ ಕೆಲಸ ಮಾಡಿದರು. ನಿಜ ಅರ್ಥದಲ್ಲಿ ಅವರು ಕಾಯಕಯೋಗಿಗಳು. ಅಣ್ಣ ಬಸವಣ್ಣನವರ ಕಾಯಕ ತತ್ವವನ್ನು ಅನುಷ್ಠಾನಕ್ಕೆ ತಂದಿರುವ ಅವರು ಪರೋಪಕಾರದಲ್ಲಿಯೇ ಜೀವನದ ಸಾರ್ಥಕತೆ ಕಂಡುಕೊಂಡರು. ಕೋಟಿಗೊಬ್ಬ ಶರಣ ಎಂಬ ಮಾತಿನಂತೆ ಹೇಳಿದ್ದನ್ನೇ ಮಾಡುವ, ಮಾಡುವುದನ್ನೇ ಹೇಳುವ ವ್ಯಕ್ತಿತ್ವ ಅವರದಾಗಿತ್ತು. ಅವರ ನಡೆ ನುಡಿ ಒಂದೇ ಇರುವುದರಿಂದಲೇ ಸಮಾಜದಲ್ಲಿ ಅವರಿಗೆ ಇಂದಿಗೂ ಅದೇ ಗೌರವ, ಘನತೆಯುಕ್ತ ಸ್ಥಾನವಿರುವುದನ್ನು ಅವಲೋಕಿಸಬಹುದು. ಅವರೆಂದೂ ಅಧಿಕಾರದ ದರ್ಪದಿಂದ ವರ್ತಿಸಿದವರಲ್ಲ. ತಮ್ಮ ಕ್ಷೇತ್ರದ ಜನತೆಗೆ ನಡೆದಾಡುವ ದೇವರಾಗಿ ಕಂಡವರು. ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವೋನ್ನತ ಸೇವೆಯನ್ನು ನೀಡಿದರು. ಮಹಾಸಭೆಯನ್ನು ಸಾಕಷ್ಟು ವಿಸ್ತರಿಸಿ ಬೆಳೆಸಿದ್ದಾರೆ. ಅವರ ಕಾಲದಲ್ಲಿಯೇ ಅತಿ ಹೆಚ್ಚು ಸದಸ್ಯರ ನೋಂದಣಿಯಾಗಿದ್ದು ದಾಖಲೆ. ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ವೀರಶೈವ ಸಭಾಭವನ ನಿರ್ಮಿಸುವ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಸಮಾಜ ಸಂಘಟನೆಗೆ ಶಿವಶಂಕರಪ್ಪನವರು ಇಂಬು ನೀಡಿದರು. ಪ್ರತಿಯೊಂದು ಜಿಲ್ಲೆಗೆ ಮಹಾಸಭೆಯ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರೋತ್ಸಾಹಿಸಿ ವಿಶ್ವಾಸ ತುಂಬಿದರು. ಬೆಳಗಾವಿಯಲ್ಲಿ ನಿರ್ಮಾಣಗೊಂಡಿರುವ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ ಸ್ಥಾಪನೆಗೂ ಅವರ ಮಾರ್ಗದರ್ಶನ ಪ್ರೇರಣೆ, ದಾನ ಮರೆಯುವಂತಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಆರು ದಶಕಗಳಿಂದ ರಾಜಕಾರಣದಲ್ಲಿ ಸಕ್ರಿಯರಾಗಿರುವ ಶಿವಶಂಕರಪ್ಪನವರು ರಾಜ್ಯ ಸಚಿವರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಯಾವುದೇ ಪಕ್ಷಾಂತರವಿಲ್ಲದೆ ತಮ್ಮ ಸೈದ್ಧಾಂತಿಕ ವಿಚಾರಗಳಿಗೆ ಬದ್ಧರಾಗಿಯೇ ಬದುಕಿದ್ದಾರೆ. ತಮ್ಮ ಸೇವೆಗಳಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದೇ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ದಾವಣಗೆರೆಯಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ಮೂಲಕ ಗ್ರಾಮೀಣ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದ್ದಾರೆ. ವೀರಶೈವ ಲಿಂಗಾಯತ ಸಮಾಜಕ್ಕೆ ಡಾ.ಶಾಮನೂರು ಶಿವಶಂಕರಪ್ಪನವರು ಒಂದು ದೊಡ್ಡ ಆಸ್ತಿ. ಪ್ರತ್ಯೇಕ ಧರ್ಮ ಹೋರಾಟದ ವೇಳೆ ವಿಭಜನೆ ವಿರೋಧಿಸಿ ಗಟ್ಟಿಯಾಗಿ ನಿಂತರು. ಪಕ್ಷವನ್ನು ಎದುರುಹಾಕಿಕೊಂಡು ವೀರಶೈವ ಲಿಂಗಾಯತ ಸಮಾಜದ ಏಕತೆಗೆ ಹೋರಾಡಿದರು. ಬಹುಮುಖ್ಯವಾಗಿ ಅವರು ಲಿಂಗಾಯತ ಸಮಾಜವನ್ನು ಇಬ್ಭಾಗವಾಗುವುದರಿಂದ ರಕ್ಷಿಸಿದ್ದಾರೆ. ರಾಜಕೀಯ ರಂಗದಲ್ಲಿಯೂ ಸಮಾಜ ಒಡೆಯದಂತೆ, ಸಮಾಜದ ಮತಗಳು ಹಂಚಿ ಹೋಗದಂತೆ ನೋಡಿಕೊಂಡವರು ಶಾಮನೂರ ಅವರು.
ಅವರು ಬದುಕಿನುದ್ದಕ್ಕೂ ಸಮಾಜಮುಖಿ ಚಿಂತನೆ ಮಾಡಿದರು. ನನ್ನ ಹಿರಿಯಣ್ಣನಾಗಿ ಮಾರ್ಗದರ್ಶಿಸಿದವರು. ಕೆಎಲ್‌ಇ ಸಂಸ್ಥೆಯ ಬೆಳವಣಿಗೆ ಕಂಡು ಹರ್ಷವ್ಯಕ್ತಪಡಿಸಿದವರು. ಅಂತಹ ಹಿರಿಯಣ್ಣನನ್ನು ಕಳೆದುಕೊಂಡ ನೋವು ಬಾದಿಸುತ್ತಿದೆ. ಸಮಾಜಮುಖಿಯಾದವನಿಗೆ, ದಾನಶೂರ ಆದವನಿಗೆ ಎಂದಿಗೂ ಸಾವಿಲ್ಲ. ಶರಣರನ್ನು ಮರಣದಲ್ಲಿ ಕಾಣು ಎಂಬುವುದು ನಮ್ಮ ಶರಣಸಂಸ್ಕೃತಿಯ ತಿರುಳು. ಶಾಮನೂರು ಶಿವಶಂಕರಪ್ಪನವರ ಚೇತನ ಚಿರಂಜೀವಿ ಎಂದು ಸ್ಮರಿಸಿದ್ದಾರೆ.



