ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮಾಧ್ಯಮ ಲೋಕದ ಎಲ್ಲ ಅವಶ್ಯಕತೆಗಳಿಗೂ ಸ್ಪಂದಿಸುವ ವಿನೂತನವಾದ ಮಾಧ್ಯಮ ಮನೆ ಪ್ರಗತಿ ಮೀಡಿಯಾ ಹೌಸ್ ಮಂಗಳವಾರ ಬೆಳಗಾವಿಯಲ್ಲಿ ಆರಂಭವಾಯಿತು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಂಸದ ಸುರೇಶ ಅಂಗಡಿ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾತೇಶ ಕವಟಗಿಮಠ, ಮೈಸೂರು ಮಿನರಲ್ಸ್ ಚೇರಮನ್, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಸೇರಿದಂತೆ ಬೆಳಗಾವಿಯ ನೂರಾರು ಗಣ್ಯರ ಉಪಸ್ಥಿತಿಯಲ್ಲಿ ಪ್ರಗತಿ ಮೀಡಿಯಾ ಹೌಸ್, ಪ್ರಗತಿವಾಹಿನಿ ಹಾಗೂ ಇನ್ ಸ್ಪೈಯರ್ ಕರಿಯರ್ ಇನ್ ಸ್ಟಿಟ್ಯೂಟ್ ವಿಧ್ಯುಕ್ತವಾಗಿ ಚಾಲನೆ ಪಡೆಯಿತು.
ಮಾಧ್ಯಮ ಕ್ಷೇತ್ರದಲ್ಲಿ 25 ವರ್ಷಗಳ ಅನುಭವ ಹೊಂದಿರುವ ಎಂ.ಕೆ.ಹೆಗಡೆ ಬೆಳಗಾವಿಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹಲವಾರು ರಾಜಕಾರಣಿಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ಕಲ್ಪನೆಯ ಪ್ರಗತಿ ಮೀಡಿಯಾ ಹೌಸ್ ಬೆಳಗಾವಿ ಹಾಗೂ ಈ ಭಾಗದ ಅಭಿವೃದ್ಧಿಗೆ ಕೊಡುಗೆ ನೀಡಲಿ ಎಂದು ಗಣ್ಯರು ಹಾರೈಸಿದರು.
ಪ್ರಗತಿ ಮೀಡಿಯಾ ಹೌಸ್ ಮತ್ತು ಪ್ರಗತಿ ವಾಹಿನಿ ಬೆಳವಣಿಗೆಗೆ ಎಲ್ಲ ರೀತಿಯ ಸಹಕರ ನೀಡುವ ಭರವಸೆಯನ್ನು ಗಣ್ಯರು ನೀಡಿದರು.
ಒಳಿತನ್ನು ತರುವ ಬದಲಾವಣೆ ಆಗಲಿ
ಎಲ್ಲ ರಂಗಗಳಂತೆ ಮಾಧ್ಯಮ ರಂಗವೂ ಬದಲಾಗುತ್ತಿದೆ. ಕೇವಲ ಪತ್ರಿಕೆಗಳು ಇದ್ದ ಕಾಲವಿತ್ತು. ನಂತರ ಎಲೆಕ್ಟ್ರಾನಿಕ್ ಮೀಡಿಯಾ ಹಾಗೂ ಈಗ ಡಿಜಿಟಲ್ ಮೀಡಿಯಾ ಯುಗ ಬಂದಿದೆ. ಈ ಬದಲಾವಣೆ ಸಮಾಜಕ್ಕೆ ಒಳಿತನ್ನು ತರುವ ಬದಲಾವಣೆ ಆಗಲಿ ಎಂದು ಅರಣ್ಯ ಹಾಗೂ ಜೀವಿ ಪರಿಸರ ಖಾತೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಒಂದು ಕಾಲದಲ್ಲಿ ಸುದ್ದಿಗಾಗಿ ಕೇವಲ ಪಿಟಿಐ ಹಾಗೂ ಯುಎನ್‌ಐ ಸುದ್ದಿಸಂಸ್ಥೆಗಳನ್ನು ಅವಲಂಬಿಸಬೇಕಿತ್ತು. ಆದರೆ ಈಗ ಜಗತ್ತು ಚಿಕ್ಕದಾಗಿದ್ದು ಯಾವುದೇ ಸುದ್ದಿಯಾದರೂ ಕ್ಷಣಾರ್ಧದಲ್ಲಿ ಜನರಿಗೆ ತಲುಪುವಂತಾಗಿದೆ. ಈ ಒಂದು ತಾಂತ್ರಿಕತೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ. ಈ ಭಾಗದ ಜ್ವಲಂತ ಸಮಸ್ಯೆಗಳಾದ ಮಹದಾಯಿ, ಕೃಷ್ಣಾ ಸಮಸ್ಯೆ ಸೇರಿದಂತೆ ಇನ್ನುಳಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಡಿಜಿಟಲ್ ಮೀಡಿಯಾ ಮುಂದಾಗಲಿ ಎಂದು ಅವರು ನುಡಿದರು.
ಬೆಳಗಾವಿ ದಕ್ಷಿಣ ಭಾರತದ ಹೆಬ್ಬಾಗಿಲು
ಸಮಾರಂಭ ಉದ್ಘಾಟಿಸಿದ ಸಂಸದ ಸುರೇಶ ಅಂಗಡಿ ಮಾತನಾಡಿ, ಬೆಳಗಾವಿಯು ಐದು ಭಾಷೆಗಳನ್ನಾಡುವ ಜನರ ಸಾಂಸ್ಕೃತಿಕ ಸಂಗಮದ ಜಿಲ್ಲೆಯಾಗಿದೆ. ಆದರೆ ಇಲ್ಲಿನ ಒಳ್ಳೆಯ ಕಾರ್ಯಗಳು, ಸುದ್ದಿಗಳು ಜಿಲ್ಲೆ ಬಿಟ್ಟು ಹೊರಗಿನವರಿಗೆ ತಿಳಿಯುತ್ತಿಲ್ಲ. ಈ ನಿಟ್ಟಿನಲ್ಲಿ ಇಲ್ಲಿನ ಒಳ್ಳೆಯ ಸಂಗತಿಗಳು ಎಲ್ಲರಿಗೂ ತಿಳಿಯುವಂತಾಗಲು ಡಿಜಿಟಲ್ ಮೀಡಿಯಾ ಸಹಕಾರಿ ಎಂದರು.
ಬೆಳಗಾವಿಯನ್ನು ಗಡಿನಾಡು ಎಂದು ಸಂಬೋಧಿಸುವ ಪರಿಪಾಠವನ್ನು ತಪ್ಪಿಸಬೇಕಿದೆ. ಬೆಳಗಾವಿ ದಕ್ಷಿಣ ಭಾರತದ ಹೆಬ್ಬಾಗಿಲು. ಹಾಗೆಯೇ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಪ್ರತ್ಯೇಕಿಸುವ ಹಾಗೂ ಇಲ್ಲಿನ ನಾಯಕರನ್ನು ಉತ್ತರ ಕರ್ನಾಟಕಕ್ಕೆ ಸೀಮಿತಗೊಳಿಸುವುದನ್ನು ನಿಲ್ಲಿಸಬೇಕಿದೆ. ಈ ಬಗ್ಗೆ ಪ್ರಜ್ಞಾವಂತರು ಚಿಂತಿಸಲಿ ಎಂದು ಸುರೇಶ ಅಂಗಡಿ ಮಾರ್ಮಿಕವಾಗಿ ನುಡಿದರು.
ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿ
ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಲಂಕೇಶ ಪತ್ರಿಕೆ ಒಂದು ಕಾಲದಲ್ಲಿ ಇಡೀ ರಾಜಕೀಯ ವ್ಯವಸ್ಥೆಯನ್ನೇ ಬದಲಾವಣೆ ಮಾಡಿತ್ತು. ಅಂಥ ಶಕ್ತಿ ಮಾಧ್ಯಮಗಳಿಗೆ ಇದೆ. ಅದೇ ರೀತಿ ಈಗಲೂ ಮಾಧ್ಯಮಗಳು ಕೆಲಸ ಮಾಡಬೇಕಿದೆ ಎಂದರು.
ಪ್ರಗತಿ ಮಾಧ್ಯಮ ಮನೆ ಎನ್ನುವ ಹೊಸ ಕಲ್ಪನೆ ಬೆಳಗಾವಿ ಜಿಲ್ಲೆಯಲ್ಲಿ ಹೊಸ ಬದಲಾವಣೆ ತರಲಿ. ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿ ಎಂದು ಅವರು ಹಾರೈಸಿದರು.
ನನ್ನ ಬೆಳೆಸಿದ್ದು ಮಾಧ್ಯಮ
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ನಾನು 20 ವರ್ಷಗಳಲ್ಲಿ ಖಾನಾಪುರದಿಂದ ರಾಜ್ಯಮಟ್ಟದ ರಾಜಕಾರಣಿಯಾಗಿ ಬೆಳೆಯಲು ಮಾಧ್ಯಮದ ಪಾತ್ರ ಬಹು ದೊಡ್ಡದು. ನಮ್ಮ ವಿಚಾರಗಳನ್ನು ಜನರಿಗೆ ತಿಳಿಸಲು, ನಮ್ಮ ಬಗ್ಗೆ ಅಭಿಪ್ರಾಯ ಮೂಡಿಸಲು ಮಾಧ್ಯಮಗಳು ಮುಖ್ಯ ಪಾತ್ರ ವಹಿಸುತ್ತವೆ. ಹಾಗೆಯೇ ನಾವು ತಪ್ಪು ಮಾಡಿದಾಗ ಅದನ್ನು ಎತ್ತಿ ತೋರಿಸಿ ತಿದ್ದಿಕೊಳ್ಳಲು ಸಹಾಯ ಮಾಡುತ್ತವೆ ಎಂದರು.
ಎಂ.ಕೆ.ಹೆಗಡೆ ಕಳೆದ 15 ವರ್ಷದಿಂದಲೂ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ರಾಜಕಾರಣಿಗಳು ಸೇರಿದಂತೆ ಈ ಭಾಗದ ಹಲವಾರು ಜನರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಹೊಸ ಉದ್ಯಮ ಯಶಸ್ವಿಯಾಗಲಿ. ಅದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿ ತ್ವರಿತ, ವಸ್ತುನಿಷ್ಠ
ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ಮಾಧ್ಯಮಗಳು ಸುದ್ದಿಗೆ ಮಹತ್ವ ನೀಡಲಿ. ವ್ಯಕ್ತಿ ಯಾರೇ ಆಗಿದ್ದರೂ ಅವರು ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಜನರಿಗೆ ವಸ್ತುನಿಷ್ಠವಾಗಿ ತಿಳಿಸಲಿ. ಕೇವಲ ಟಿಆರ್‌ಪಿ ಹಿಂದೆ ಬಿದ್ದು ಯಾವುದನ್ನೂ ಸುದ್ದಿಯಾಗಿ ತೋರಿಸುವುದು ಬೇಡ ಎಂದು ಹೇಳಿದರು.
ಪ್ರಗತಿವಾಹಿನಿ ಅತ್ಯಂತ ತ್ವರಿತವಾಗಿ ಮತ್ತು ವಸ್ತುನಿಷ್ಠ ವರದಿಗಳನ್ನು ನೀಡುತ್ತಿದೆ. ಪ್ರಗತಿ ವಾಹಿನಿ ಮುಖ್ಯಸ್ಥ ಎಂ.ಕೆ.ಹೆಗಡೆ ಮೊದಲಿನಿಂದಲೂ ತಾವು ಹಮ್ಮಿಕೊಳ್ಳುವ ಎಲ್ಲ ಯೋಜನೆಗಳ ಸಮಗ್ರ ವರದಿ ನೀಡುವ ಮೂಲಕ ಸಹಕಾರ ನೀಡುತ್ತ ಬಂದಿದ್ದಾರೆ ಎಂದು ಅಭಯ್ ಹೇಳಿದರು.
ಅಭಿವೃದ್ಧಿಯ ಚರ್ಚೆಯಾಗಲಿ
ಸಾನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಇರುವ ಮಾಧ್ಯಮಗಳ ಬಗ್ಗೆ ನನಗೆ ಮೊದಲಿನಿಂದಲೂ ಒಲವಿದೆ. ಈಗಿನ ಸಂದರ್ಭದಲ್ಲಿ ಸುದ್ದಿಗಳು ಶುದ್ಧವಾಗಲು ಅಧ್ಯಯನ ನಡೆಸಬೇಕಿದೆ. ಮಾಧ್ಯಮಗಳು ಹಾಗೂ ಎಲ್ಲರೂ ಸೇರಿ ಈ ಭಾಗವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಶ್ರಮಿಸೋಣ ಎಂದರು.
ಮಾಧ್ಯಮಗಳಿಗೆ ಪೂರಕವಾಗಿ ಕೆಲಸ
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಗತಿ ಮೀಡಿಯಾ ಹೌಸ್ ಮುಖ್ಯಸ್ಥ ಎಂ.ಕೆ. ಹೆಗಡೆ, ಇಂದು ಸುದ್ದಿ ಮಾಧ್ಯಮವು ಸಿಬ್ಬಂದಿ ಕೊರತೆ, ಸಮಯದ ಅಭಾವ, ಅನುಭವದ ಸಿಬ್ಬಂದಿ ಕೊರತೆಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಇನ್ನಿತರ ಯಾರದೇ ಕೆಲಸಗಳ ಸುದ್ದಿಗಳನ್ನು ಸಮಗ್ರವಾಗಿ ಹಾಗೂ ಕ್ಷಿಪ್ರವಾಗಿ ಸುದ್ದಿಮನೆಗಳಿಗೆ ತಲುಪಿಸಲು ವ್ಯತ್ಯಯವಾಗುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಿ ಸಿದ್ಧಪಡಿಸಿದ ಗುಣಮಟ್ಟದ ಸುದ್ದಿಯನ್ನು ಮಾಧ್ಯಮಗಳಿಗೆ ತಲುಪಿಸಲು ಪ್ರಗತಿ ಮೀಡಿಯಾ ಹೌಸ್ ಶ್ರಮಿಸಲಿದೆ. ಸಮಾಜ ಹಾಗೂ ಮಾಧ್ಯಮ ಎರಡಕ್ಕೂ ಸಹಾಯಕವಾಗುವ ರೀತಿಯಲ್ಲಿ ಮೀಡಿಯಾ ಹೌಸ್ ಕೆಲಸ ಮಾಡಲಿದೆ ಎಂದರು.
ಕೇವಲ ಐದು ತಿಂಗಳ ಹಿಂದೆ ಆರಂಭಿಸಲಾದ ಪ್ರಗತಿ ವಾಹಿನಿ ಸುದ್ದಿ ಪೋರ್ಟಲ್ ಈಗಾಗಲೇ 78 ಸಾವಿರ ಓದುಗರನ್ನು ಹೊಂದಿ ಮುನ್ನಡೆಯುತ್ತಿದೆ. ಇನ್ನು ಮುಂದೆಯೂ ಕ್ಷಣ ಕ್ಷಣದ ಸುದ್ದಿಗಳನ್ನು ಜನರಿಗೆ ತಲುಪಿಸಲು ಪ್ರಗತಿ ಮಿಡಿಯಾ ಹೌಸ್ ನಿಷ್ಠೆಯಿಂದ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಪ್ರಗತಿಮೀಡಿಯಾ ಹೌಸ್ ಮೊದಲ ಕ್ಲೈಂಟ್ ಕರ್ನಾಟಕ ಎಂ ಸ್ಯಾಂಡ್ ಅಸೋಸಿಯೇಶನ್ ಚೇರಮನ್ ಪಾಂಡುರಂಗ ರಡ್ಡಿ ಅವರನ್ನು ಇದೇ ವೇಳೆ ಹುಕ್ಕೇರಿ ಶ್ರೀಗಳು ಸತ್ಕರಿಸಿದರು.
ಬೆಳಗಾವಿ ಉತ್ತರ ಭಾಗದ ಶಾಸಕ ಅನಿಲ ಬೆನಕೆ ಸೇರಿದಂತೆ ಬೆಳಗಾವಿಯ ನೂರಾರು ಗಣ್ಯರು, ಸಂಘಸಂಸ್ಥಗಳ ಮುಖ್ಯಸ್ಥರು, ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆರಂಭದಲ್ಲಿ ಅನಿಮೇಶ ಹೆಗಡೆ ಪ್ರಾರ್ಥನಾ ಗೀತೆ ಹಾಡಿದರು. ಇನ್‌ಸ್ಪೈಯರ್ ಕರಿಯರ್ ಇನಸ್ಟಿಟ್ಯೂಟ್ ಹಾಗೂ ಪ್ರಗತಿ ಮೀಡಿಯಾ ಹೌಸ್‌ನ ಕೈಪಿಡಿಯನ್ನು ಸಚಿವ ಸತೀಶ ಜಾರಕಿಹೊಳಿ ಬಿಡುಗಡೆ ಮಾಡಿದರು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ ಹಿರೇಮಠ ವಂದಿಸಿದರು.
————————–
ಗಣ್ಯರ ಭಾಷಣಗಳ ಆಡಿಯೋ ಕ್ಲಿಪಿಂಗ್ಸ್ ಇಲ್ಲಿದೆ:
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ