ಪ್ರಗತಿವಾಹಿನಿ ವರದಿ ಫಲಶ್ರುತಿ; ಶಾಂತಮ್ಮಳ ನೋವಿಗೆ ಸ್ಪಂದಿಸಿ ಮಾನವೀಯತೆ ಮೆರೆದ ‘ಹೃದಯವಂತರು’
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತನ್ನ ಕಿತ್ತು ತಿನ್ನುವ ಬಡತನ, ನಿರುದ್ಯೋಗ ಮತ್ತು ಹಸಿವಿನಿಂದ ಕಂಗೆಟ್ಟ ತಾಯಿಯ ಪರಿಸ್ಥಿತಿಯನ್ನು ಎದುರಿಸದೇ ಇಹಲೋಕ ತ್ಯಜಿಸಿದ್ದ ಬಸವರಾಜನ ಮರಣಾನಂತರ ಅನಾಥಳಾಗಿದ್ದ ಶಾಂತಮ್ಮಳ ನೋವಿಗೆ ಕೆಲವು ‘ಹೃದಯವಂತರು’ ಸ್ಪಂದಿಸಿದ್ದಾರೆ.
ಗುರುವಾರ ಬಸವರಾಜನ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದ ಪಟ್ಟಣದ ಕದಂಬ ಫೌಂಡೇಶನ್ ಮಗನ ಪಾಲಿಗೆ ಪ್ರತ್ಯಕ್ಷ ದೈವವಾಗಿತ್ತು. ಮಗನನ್ನು ಕಳೆದುಕೊಂಡು ಅನಾಥಳಾದ ತಾಯಿ ಶಾಂತಮ್ಮಳನ್ನು ಶುಕ್ರವಾರ ಬೆಳಗಾವಿಯ ಅನಾಥಾಶ್ರಮಕ್ಕೆ ಸೇರಿಸಿ ಆಕೆಯ ಭವಿಷ್ಯಕ್ಕೆ ನೆಲೆ ಕಲ್ಪಿಸುವ ಮೂಲಕ ಕೆಲ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಗಳು ಆಕೆಯ ಪಾಲಿಗೆ ಪ್ರತ್ಯಕ್ಷ ದೇವರಾಗಿ ಪರಿಣಮಿಸಿದ್ದಾರೆ.
ಶಾಂತಮ್ಮಳ ಪರಿಸ್ಥಿತಿಗೆ ಸ್ಪಂದಿಸಿದ ನಂದಗಡ ಠಾಣೆಯ ಇನ್ಸಪೆಕ್ಟರ್ ಎಸ್.ಸಿ ಪಾಟೀಲ ಆಕೆಯ ಭವಿಷ್ಯದ ಜೀವನದ ಬಗ್ಗೆ ಗಮನಹರಿಸುವಂತೆ ಶುಕ್ರವಾರ ಖಾನಾಪುರದ ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಶ ಕಿವಡಸಣ್ಣವರ ಅವರಿಗೆ ಪತ್ರ ಬರೆದಿದ್ದರು. ಶಾಂತಮ್ಮಳನ್ನು ಅನಾಥಾಶ್ರಮಕ್ಕೆ ಸೇರಿಸುವ ಸಲುವಾಗಿ ಬೆಳಗಾವಿಯ ಹಿರಿಯ ಪತ್ರಕರ್ತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ ಹೆಗಡೆ ಅವರೂ ಸಹ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ನಾಮದೇವ ಬಿಳಕಿ ಅವರ ಜೊತೆ ಸಂಪರ್ಕ ಸಾಧಿಸಿ ಈ ಮಾಹಿತಿಯನ್ನು ಖಾನಾಪುರದ ಕೆಲ ಸಾಮಾಜಿಕ ಕಾರ್ಯಕರ್ತರಿಗೆ ತಿಳಿಸಿದ್ದರು.
ಶಾಂತಮ್ಮಳ ಪರಿಸ್ಥಿತಿಗೆ ಸ್ಪಂದಿಸಿದ ತಾಲೂಕು ವೈದ್ಯಾಧಿಕಾರಿಗಳು ಆಕೆಯ ವೈದ್ಯಕೀಯ ಪರೀಕ್ಷೆ ಮಾಡಿಸಿ ಆಕೆ ಆರೋಗ್ಯವಂತಳಾಗಿದ್ದಾಳೆ ಎಂದು ಪ್ರಮಾಣ ಪತ್ರ ನೀಡಿದರು. ಬಳಿಕ ಆಕೆಯನ್ನು ಅನಾಥಾಶ್ರಮಕ್ಕೆ ರವಾನಿಸಲು ತಾಲೂಕು ಆಸ್ಪತ್ರೆಯಿಂದ ಅಂಬ್ಯುಲನ್ಸ್ ವ್ಯವಸ್ಥೆಯನ್ನೂ ಕಲ್ಪಿಸಿದರು, ನಂದಗಡ ಠಾಣೆಯ ಕಾನ್ಸ್ಸ್ಟೇಬಲ್ ಮಾರುತಿ ತುರಮರಿ ಮತ್ತು ಕದಂಬ ಫೌಂಡೇಶನ್ ಸಂಸ್ಥಾಪಕ ಜಾರ್ಡನ್ ಗೋನ್ಸಾಲ್ವಿಸ್ ಶಾಂತಮ್ಮಳನ್ನು ಅಂಬ್ಯುಲನ್ಸ್ನಲ್ಲಿ ಬೆಳಗಾವಿಯ ಅನಾಥಾಶ್ರಮಕ್ಕೆ ಸೇರಿಸುವ ಮೂಲಕ ಆಕೆಯ ಭವಿಷ್ಯಕ್ಕೆ ಹೊಸ ಭಾಷ್ಯ ಬರೆದು ಮಾನವೀಯತೆ ಮೆರೆದರು.
‘ವಾಸ್ತವವಾಗಿ ಮಗನನ್ನು ಕಳೆದುಕೊಂಡ ತಾಯಿ ಶಾಂತಮ್ಮಳಿಗೆ ಆಸರೆ ಒದಗಿಸಲು ಜಿಲ್ಲಾಡಳಿತ ಅಥವಾ ತಾಲೂಕಾಡಳಿತ ಸ್ಪಂದಿಸಬೇಕಿತ್ತು. ಸಮಯದ ಬೊಂಬೆಯಾಗಿ ಅನಾಥಳಾಗಿದ್ದ ಶಾಂತಮ್ಮಳ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ನಮ್ಮ ಸರ್ಕಾರ ಹೊರಬೇಕಿತ್ತು. ಆದರೆ ಇದುವರೆಗೂ ಖಾನಾಪುರದ ತಹಸೀಲ್ದಾರರಾಗಲಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಲಿ ನೊಂದ ಮಹಿಳೆಯತ್ತ ಗಮನ ಹರಿಸಲಿಲ್ಲ. ಆಕೆಯ ಕಷ್ಟದ ಕುರಿತು ತಿರುಗಿಯೂ ನೋಡಲಿಲ್ಲ. ಹೀಗಾಗಿ ನಂದಗಡ ಠಾಣೆಯ ಇನ್ಸಪೆಕ್ಟರ್, ಖಾನಾಪುರದ ತಾಲೂಕು ವೈದ್ಯಾಧಿಕಾರಿ, ತಾಲೂಕು ಆಸ್ಪತ್ರೆಯ ಸಿಬ್ಬಂದಿ ಮತ್ತು ಬೆಳಗಾವಿಯ ಕೆಲ ಸಾಮಾಜಿಕ ಕಾರ್ಯಕರ್ತರ ಸಹಕಾರದೊಂದಿಗೆ ಶಾಂತಮ್ಮಳನ್ನು ಬೆಳಗಾವಿಯ ಅನಾಥಾಶ್ರಮಕ್ಕೆ ದಾಖಲಿಸಲಾಗಿದೆ. ಇಂತಹ ಸೂಕ್ಷ್ಮ ವಿಷಯಗಳಲ್ಲಿ ಜಾಣಮೌನ ಅನುಸರಿಸಿ ತಮ್ಮ ಕರ್ತವ್ಯದಿಂದ ನುಸುಳಲು ಯತ್ನಿಸುತ್ತಿರುವ ಸರ್ಕಾರಿ ಅಧಿಕಾರಿಗಳ ಮನೋಭಾವ ಮೊದಲು ಬದಲಾಗಬೇಕು. ಹೀಗಾದಾಗ ಮಾತ್ರ ಮಾನವೀಯತೆಗೆ ಮೌಲ್ಯ ಸಿಗಲು ಸಾಧ್ಯ’ ಎಂದು ಕದಂಬ ಫೌಂಡೇಶನ್ ಸಂಸ್ಥಾಪಕ ಜಾರ್ಡನ್ ಗೋನ್ಸಾಲ್ವಿಸ್ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ