*ಹೃದಯಾಘಾತ ಪ್ರಕರಣ; ಸಿಎಂ ಹೇಳಿಕೆ ಬೇಜವಾಬ್ದಾರಿ ಪರಮಾವಧಿ ಎಂದ ಪ್ರಹ್ಲಾದ್ ಜೋಶಿ*

ಹುಬ್ಬಳ್ಳಿ: ರಾಜ್ಯದಲ್ಲಿ ಹೆಚ್ಚು ಜನ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ತೀವ್ರ ಆತಂಕದ ಸಂಗತಿ. ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ಸಂಬಂಧವಿಲ್ಲವೆಂದು ರಾಜ್ಯ ಸರ್ಕಾರ ನೇಮಿಸಿದ ತಜ್ಞರ ಸಮಿತಿಯೇ ವರದಿ ಸಲ್ಲಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಈಗೇನು ಹೇಳುತ್ತಾರೆ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೆ, ʼಕೋವಿಡ್ ಲಸಿಕೆಯೇ ಇದಕ್ಕೆ ಕಾರಣʼ ಎಂಬ ಸಿಎಂ ಹೇಳಿಕೆ ಬೇಜವಾಬ್ದಾರಿಯ ಪರಮಾವಧಿ. ಇದಕ್ಕಾಗಿ ಅವರು ದೇಶದ ಮತ್ತು ವಿಜ್ಞಾನಿಗಳ ಸಮೂಹದ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಸಿಎಂ, ಯಾವುದನ್ನೂ ಸರಿಯಾಗಿ ಪರಿಶೀಲಿಸದೆ, ತಜ್ಞರ ವರದಿ ನೋಡದೆ ಕೋವಿಡ್ ಲಸಿಕೆಯನ್ನೇ ಅನುಮಾನಿಸುವುದು, ಲಸಿಕೆ ಕಂಡು ಹಿಡಿದ ಸಂಶೋಧಕರು ಮತ್ತು ವಿಜ್ಞಾನಿಗಳನ್ನು ಅಪಮಾನಿಸುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಕೂಡಲೇ ಟ್ವೀಟ್ ಮಾಡಿ ದೇಶದ ವಿಜ್ಞಾನಿಗಳ ಸಮುದಾಯದ ಕ್ಷಮೆ ಕೇಳಬೇಕು ಎಂದರು.
ಸಿಎಂ ವಿದೇಶಿ ಲಸಿಕೆ ಪಡೆದಿದ್ದಾರಾ?: ಸಿದ್ದರಾಮಯ್ಯ ಅವರಿಗೀಗ 74 ವರ್ಷ. ಅವರೂ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ ಅಲ್ಲವೇ? ಅಥವಾ ವಿದೇಶಿ ಲಸಿಕೆ ತೆಗೆದುಕೊಂಡಿದ್ದಾರಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಸಚಿವರು, ರಾಜ್ಯ ಸರ್ಕಾರವೇ ನೇಮಿಸಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ನೇತೃತ್ವದ 10 ತಜ್ಞರ ಸಮಿತಿ ಅಧ್ಯಯನ ನಡೆಸಿ ʼಕೋವಿಡ್ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲʼ ಎಂದು ಸ್ಪಷ್ಟ ವರದಿ ಸಲ್ಲಿಸಿದೆ ಇದಕ್ಕೇನು ಹೇಳುತ್ತಾರೆ ಸಿಎಂ? ಎಂದು ಪ್ರಶ್ನಿಸಿದರು.
ವರದಿ ಒಪ್ಪುವುದಿಲ್ಲವೇ ಸಿಎಂ?: ರಾಜ್ಯ ಸರ್ಕಾರವೇ ಅಧಿಕೃತವಾಗಿ ರಚಿಸಿದ ಸಮಿತಿ ಅಧ್ಯಯನ ನಡೆಸಿ ಕೋವಿಡ್ ಲಸಿಕೆ ಅಡ್ಡ ಪರಿಣಾಮ ಬೀರಿಲ್ಲ ಎಂಬ ವರದಿ ಸಲ್ಲಿಸಿದೆ. ಸಿಎಂ ಈ ವರದಿಯನ್ನು ಒಪ್ಪುವುದಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ದೇಶದಲ್ಲಿ ಹೃದಯಾಘಾತ ಹೆಚ್ಚಿದ್ದರೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ. ICM̧R, NCDCಯವರು ಪರಿಶೀಲನೆ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಭಾರತದಲ್ಲಿ ನಮ್ಮದೇ ಆದ ವ್ಯಾಕ್ಸಿನ್ ತಯಾರಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ಲಸಿಕೆ ಸಿದ್ಧಪಡಿಸಲು ಅಗತ್ಯ ಅನುದಾನ ನೀಡಿ ಪ್ರೋತ್ಸಾಹಿಸಿದರು. ಪ್ರತಿಫಲವಾಗಿ ಭಾರತ ಮೊದಲ ಬಾರಿ ಸ್ವದೇಶಿ ವ್ಯಾಕ್ಸಿನ್ ಹೊರ ತಂದಿತು. ಕೋವಿಡ್ ಸಂಕಷ್ಟ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿತು ಎಂದರು.
ಸಿಎಂ ಉದ್ದೇಶವೇನು?
ದೇಶಿಯ ಲಸಿಕೆ ತಯಾರಿಸಿ 240 ಕೋಟಿ ಡೋಸ್ ಕೊಟ್ಟಿದೆ. ಅಲ್ಲದೇ, 150 ರಾಷ್ಟ್ರಗಳಿಗೆ ಭಾರತದ ಲಸಿಕೆ ರವಾನೆ ಆಗಿದೆ. ಲಸಿಕೆ ಪಡೆದು ಜೀವ ರಕ್ಷಿಸಿಕೊಂಡ ವಿದೇಶಗರು ಭಾರತವನ್ನು ಕೊಂಡಾಡುತ್ತಿದ್ದಾರೆ. ಧನ್ಯಾತಾಭಾವ ಅರ್ಪಿಸುತ್ತಿದ್ದಾರೆ. ಹೀಗಿರುವಾಗ ಕೋವಿಡ್ ಲಸಿಕೆ ಅನುಮಾನಿಸುವ ಸಿಎಂ ಸಿದ್ದರಾಮಯ್ಯ ಅವರ ಉದ್ದೇಶವೇನು? ಔಷಧಿ ಉತ್ಪನ್ನ, ರಫ್ತಿನಲ್ಲಿ ಮುಂಚೂಣಿಯಲ್ಲಿರುವ ಭಾರತ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಳ್ಳಬೇಕು ಎಂಬ ಉದ್ದೇಶವೇ? ಎಂದು ವಾಗ್ದಾಳಿ ನಡೆಸಿದರು.
ವಿದೇಶಿ ಲಸಿಕೆ ಬಂದರೆ ಏನೂ ಆಗಲ್ಲ ಇವರಿಗೆ: ದೇಶದಲ್ಲಿ ಪ್ರಥಮ ಬಾರಿಗೆ ಸ್ವದೇಶಿ ಲಸಿಕೆ ತಯಾರಿಸಿದರೆ ಅನುಮಾನ, ಅಪಮಾನ ಮಾಡುತ್ತದೆ ಕಾಂಗ್ರೆಸ್. ಆದರೆ ವಿದೇಶಿ ಲಸಿಕೆ ಬಂದರೆ ಏನೂ ಆಗಲ್ಲ ಇವರಿಗೆ. ಅಷ್ಟಕ್ಕೂ ವ್ಯಾಕ್ಸಿನ್ ಅನ್ನು ಮೋದಿ ಸಿದ್ಧಪಡಿಸಿದ್ದಲ್ಲ. ಅವರು ಅಗತ್ಯ ಪ್ರೋತ್ಸಾಹ ಕೊಟ್ಟಿದ್ದಾರೆ. ಸಂಶೋಧಕರು, ವಿಜ್ಞಾನಿಗಳು ಹಗಲಿರುಳು ಶ್ರಮಿಸಿದ್ದಾರೆ. ಪರಿಣಾಮ ವಿದೇಶಗಳಲ್ಲೂ ಭಾರತ ಮನೆ ಮಾತಾಯಿತು. ಇದನ್ನು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಜೋಶಿ ವಾಗ್ದಾಳಿ ನಡೆಸಿದರು
ಕಾಂಗ್ರೆಸ್ ತನ್ನ ಆಡಳಿತದಲ್ಲಿ 40 ಸಾವಿರ ಚದರ ಕಿ.ಮೀ. ಜಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು. ಈಗ ನೋಡಿದರೆ ಚೀನಾ ಮಾಡೆಲ್ ಒಪ್ಪಿಕೊಳ್ಳಬೇಕು ಎನ್ನುತ್ತದೆ. ಆಪರೇಷನ್ ಸಿಂಧೂರ್ ವೇಳೆ ಸಹ ಪಾಕಿಸ್ತಾನದ ಮಾದರಿಯಲ್ಲೇ ಹೇಳಿಕೆ ನೀಡಿತು. ಇದು ಇವರ ದೇಶಪ್ರೇಮ ಎಂಥದ್ದು ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಹರಿಹಾಯ್ದರು.