*ಅತಿವೃಷ್ಟಿ ಪರಿಹಾರ: ರಾಜ್ಯ ಸರ್ಕಾರದ ಬೇಕಾಬಿಟ್ಟಿ ಧೋರಣೆ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ*
ಪ್ರಗತಿವಾಹಿನಿ ಸುದ್ದಿ: ಅತಿವೃಷ್ಟಿ ಪರಿಹಾರ ಕಾರ್ಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬೇಕಾಬಿಟ್ಟಿ ವರ್ತನೆ ತೋರುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ಬೆಳಗಾವಿಯಲ್ಲಿ ಭಾನುವಾರ ಮಾದ್ಯಮದವರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನಸಾಮಾನ್ಯರ ಮೇಲೆ ನಿಜವಾದ ಕಾಳಜಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅತಿವೃಷ್ಟಿ ತೀವ್ರವಾಗಿದ್ದರೂ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಅತ್ಯಂತ ಕಡಿಮೆ ಮೊತ್ತದ ಪರಿಹಾರ ಘೋಷಿಸುತ್ತಿದೆ ಎಂದು ದೂರಿದರು.
ಉಸ್ತುವಾರಿ ಸಚಿವರು ಸ್ವಕ್ಷೇತ್ರಕ್ಕೆ ಸೀಮಿತ: ರಾಜ್ಯ ಸರ್ಕಾರದ ಎಲ್ಲಾ ಉಸ್ತುವಾರಿ ಸಚಿವರುಗಳು ತಮ್ಮ ತಮ್ಮ ಸ್ವಕ್ಷೇತ್ರಗಳಿಗೆ ಸೀಮಿತವಾಗಿ ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದಲ್ಲಿ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅತಿವೃಷ್ಟಿ ಸಂತ್ರಸ್ತರಿಗೆ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ಪರಿಹಾರ ಕೊಟ್ಟಿದ್ದರು. ಆದರೆ ಈಗ ಸಿದ್ದರಾಮಯ್ಯ ಸರ್ಕಾರ ಅದನ್ನು ಒಂದು ಲಕ್ಷಕ್ಕೆ ಇಳಿಸಿದೆ ಎಂದು ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮನೆಯೊಳಗೆ ನೀರು ನುಗ್ಗಿ ಹನಿಗೊಳಗಾದರೆ 10 ಸಾವಿರ ರೂ.ಇದ್ದ ಪರಿಹಾರ ಮೊತ್ತವನ್ನು 5000 ರು.ಗೆ ಇಳಿಸಿದ್ದಾರೆ. ಇದು ಜನಸಾಮಾನ್ಯರ ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಇರುವ ಕಾಳಜಿ ಎಂಥದ್ದು?ಎಂಬುದನ್ನು ತೋರ್ಪಡಿಸುತ್ತಿದೆ ಎಂದು ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು.
ಅಧಿಕಾರಕ್ಕಾಗಿ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿ, ಈಗ ಅರ್ಧಂಬರ್ಧ ಗ್ಯಾರೆಂಟಿಗಳನ್ನು ನೀಡಿದೆ. ಅದನ್ನು ಸರಿದೂಗಿಸಲು ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಿ ಜನಸಾಮಾನ್ಯರ ಬದುಕಿಗೆ ಬರೆ ಎಳೆದಿದೆ ಎಂದರು.
ರಾಜ್ಯದಲ್ಲಿ ಶತಾಯ ಗತಾಯ ಅಧಿಕಾರಕ್ಕೆ ಬರಲೆಂದು ಮುಂದಾಲೋಚನೆ ಇಲ್ಲದೆ ಸುಳ್ಳು ಭರವಸೆಗಳನ್ನು ನೀಡಿದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದ ಮೇಲೆ ಗ್ಯಾರೆಂಟಿಗಳನ್ನು ನಿಭಯಿಸಲಾಗದೆ ಪರದಾಡುತ್ತಿದೆ ಎಂದು ಪ್ರಲ್ಹಾದ ಜೋಶಿ ಟೀಕಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ