*ಪಾಪರ್ ಆಗಿದೆ ರಾಜ್ಯ ಸರ್ಕಾರ; ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ*
ರೈತರಿಗೆ ಕೇವಲ 2000 ರೂ. ಬರ ಪರಿಹಾರ ಕೊಟ್ಟಿದ್ದೀರಿ ನಾಚಿಕೆ ಆಗೋದಿಲ್ವೇ ನಿಮಗೆ? ಸಿಎಂ ವಿರುದ್ಧ ಆಕ್ರೋಶ
ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರ ವಿಪರೀತ ಸಾಲ ಮಾಡಿದ್ದು, ಪಾಪರ್ ಆಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ರೈತರಿಗೆ ಕೇವಲ 2000 ರು. ಬರ ಪರಿಹಾರ ಕೊಟ್ಟಿದ್ದೀರಿ ನಾಚಿಕೆ ಆಗುವುದಿಲ್ಲವೇ? ಎಂದು ಟೀಕಿಸಿದರು.
ಹಿಂದೆ ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ, 27000, 20000, 14000 ಹೀಗೆ ಹೆಚ್ಚಿನ ಮೊತ್ತದ ಬರ ಪರಿಹಾರ ನೀಡಿದ್ದರು. ಈಗ ನೀವ್ಯಾಕೆ ಕೊಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಕೇಂದ್ರ ಸರ್ಕಾರ ಈಗಿನಂತೆಯೇ ಅನುದಾನ ನೀಡಿತ್ತು. ಆದರೆ BSY ನಿಮಗಿಂತ ದುಪ್ಪಟ್ಟು ಪರಿಹಾರ ನೀಡಿದರು. ನಿಮ್ಮಿಂದ ಏಕೆ ಸಾಧ್ಯ ವಾಗುತ್ತಿಲ್ಲ? ಎಂದು ಜೋಶಿ ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರಿ ಅನುದಾನ ಹಂಚಿಕೆ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೀರಿ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಪರಿಹಾರ ಎಲ್ಲ ರೈತರನ್ನು ತಲುಪಿದೆ. ಆದರೆ, ನೀವೇಕೆ ಕೇವಲ 2000 ರು. ಬರ ಪರಿಹಾರ ನೀಡಿ ರೈತರನ್ನು ಕಡೆಗಣಿಸಿದ್ದೀರಿ? ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ವೈಫಲ್ಯ: ಸರ್ಕಾರ ಆದಾಯ ಕ್ರೋಢಿಕರಣದಲ್ಲಿ ವಿಫಲವಾಗಿದೆ. ಮುದ್ರಂಕ ಶುಲ್ಕ, ಆಸ್ತಿ ತೆರಿಗೆ ಹೀಗೆ ಎಲ್ಲದರ ತೆರಿಗೆ ಹೆಚ್ಚಿಸಿದೆ. ಅಷ್ಟೇ ಭ್ರಷ್ಟಾಚಾರವೂ ಹೆಚ್ಚಿದೆ. ಇನ್ನೊಂದೆಡೆ ಅರ್ಧಂಬರ್ಧ ಗ್ಯಾರೆಂಟಿಗಳಿಗೆ ಖರ್ಚು ಹೆಚ್ಚು ತೋರಿಸುತ್ತಿದ್ದಾರೆ ಎಂದು ಸಚಿವ ಜೋಶಿ ಆರೋಪಿಸಿದರು.
ಮೋದಿ ಕಡೆ ಕೈ ತೋರ್ತಾರೆ: ಸರ್ಕಾರದಲ್ಲಿ ದುಡ್ಡಿಲ್ಲದ್ದರಿಂದ ಪ್ರಧಾನಿ ಮೋದಿ ಅವರ ಕಡೆ ಕೈ ತೋರುತ್ತಿದ್ದಾರೆ ಎಂದು ಪ್ರಹ್ಲಾದ ಜೋಶಿ ಆರೋಪ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ