Politics

*ರಾಜಕೀಯ ದೊಂಬರಾಟದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ: ರಾಜ್ಯದ ಸ್ಥಿತಿ ಏನಾಗ್ತಿದೆ ಎಂದು ರಾಹುಲ್ ಗಾಂಧಿ ಇಲ್ಲಿಗೆ ಬಂದು ನೋಡಲಿ; ಜೋಶಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಜನಕಲ್ಯಾಣಕ್ಕೆ ಮುಂದಾಗದೆ ರಾಜಕೀಯ ದೊಂಬರಾಟದಲ್ಲಿ ತೊಡಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ಮಾಡಿದರು.

ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಸಿಎಂ, ಡಿಸಿಎಂ ಜನಕಲ್ಯಾಣ, ಜನರ ಹಿತ, ಅಭಿವೃದ್ಧಿಗೆ ಬದ್ಧತೆ ತೋರದೆ ತಮ್ಮ ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ ಎಂದು ಹರಿ ಹಾಯ್ದರು.

ಸಿಎಂ, ಡಿಸಿಎಂ ಆತ್ಮಾವಲೋಕನ ಮಾಡಿಕೊಳ್ಳಲಿ:

ಜನರು ತಮ್ಮ ಕಲ್ಯಾಣಕ್ಕಾಗಿ 136 ಸೀಟುಗಳನ್ನು ಕೊಟ್ಟು ಗೆಲ್ಲಿಸಿದರು. ಆದರೆ, ಅಧಿಕಾರದಲ್ಲಿ ತಾವು ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ? ಎಂಬ ಬಗ್ಗೆ ಸಿಎಂ, ಡಿಸಿಎಂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಜೋಶಿ ಸಲಹೆ ನೀಡಿದರು.

ರಾಜ್ಯದಲ್ಲಿ ಮಳೆ ಹಾನಿ, ಬೆಳೆ ಹಾನಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯೇ ಇಲ್ಲವೆಂದು ಆರೋಪಿಸಿದರು.

ಖರೀದಿ ಕೇಂದ್ರ ತೆರೆಯಲು ತಯಾರಿಯೇ ನಡೆಸಿಲ್ಲ:

ಕೇಂದ್ರ ಸರ್ಕಾರ ಹೆಸರು, ಸೂರ್ಯಕಾಂತಿ, ಉದ್ದು, ಸೋಯಾಬಿನ್ ಅನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ತ್ವರಿತ ಅನುಮತಿ ನೀಡಿದರೂ ರಾಜ್ಯದಲ್ಲಿ ಸೂಕ್ತ ತಯಾರಿಯನ್ನೇ ಮಾಡಿಕೊಳ್ಳಲಾಗಿಲ್ಲ ಎಂದು ಸಚಿವ ಜೋಶಿ ಹೇಳಿದರು.

ರಾಜ್ಯ ಸರ್ಕಾರದ ಅಧಿಕಾರಿಗಳು ಫೋನ್ ಕರೆ ಮಾಡಿ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ಕೋರಿದ್ದರು. ಪ್ರಸ್ತಾವನೆ ಸಲ್ಲಿಸಲು ಸಲಹೆ ಮಾಡಿದ್ದೆ. ಆದರಂತೆ ರಾಜ್ಯದಿಂದ ಪ್ರಸ್ತಾವನೆ ಬಂದ ಎರಡೇ ದಿನದಲ್ಲಿ, ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಿದ್ದಾಗಿದೆ. ಆದರೆ, ರಾಜ್ಯ ಸರ್ಕಾರ ಇಲ್ಲಿನ್ನೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು.

ಮಾರುಕಟ್ಟೆಯಲ್ಲಿ ಹೆಸರು, ಸೂರ್ಯಕಾಂತಿ, ಉದ್ದು, ಸೋಯಾಬಿನ್ ಗೆ ಕಡಿಮೆ ಬೆಲೆಯಿದ್ದು, ರಾಜ್ಯದ ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ತಕ್ಷಣವೇ ಖರೀದಿ ಕೇಂದ್ರ ತೆರೆಯುವಂತೆ ಅನುಮತಿ ಕೊಡಿಸಲಾಗಿದೆ. ಆದರೆ, ಇಲ್ಲಿ ನೋಡಿದರೆ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯಲು ಇನ್ನೂ ಸೂಕ್ತ ತಯಾರಿಯನ್ನೇ ಮಾಡಿಕೊಂಡಿಲ್ಲ ಎಂದು ಹೇಳಿದರು.

ಯಾವುದೇ ರಾಜ್ಯಗಳಲ್ಲಿ ಯಾವುದೇ ಸರ್ಕಾರ ಇರಲಿ ಕೇಂದ್ರ ತಾರತಮ್ಯ ತೋರುವುದಿಲ್ಲ. ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ತ್ವರಿತ ಅನುಮತಿ ನೀಡಿರುವುದೇ ಇದಕ್ಕೆ ನಿದರ್ಶನ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.

ರಸ್ತೆಗೆ ತೇಪೆ ಹಾಕಲೂ ಆಗಿಲ್ಲ ಇವರಿಂದ:

ರಾಜ್ಯದಲ್ಲಿ ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ. ಕನಿಷ್ಠ ರಸ್ತೆಗೆ ತೇಪೆ ಹಾಕುವ ಕೆಲಸವೂ ಆಗಿಲ್ಲ! ಎಂದು ಆರೋಪಿಸಿದರು.

ರಾಹುಲ್ ಗಾಂಧಿ ಇಲ್ಲಿಗೆ ಬಂದು ನೋಡಲಿ ಸ್ಥಿತಿ:

ಎನ್ ಡಿಎ ಸರ್ಕಾರ ಇರುವೆಡೆ ರಾಹುಲ್ ಗಾಂಧಿ ಓಡೋಡಿ ಹೋಗುತ್ತಾರೆ. ಆದರೆ, ತಮ್ಮದೇ ಸರ್ಕಾರ ಇರುವ ಕರ್ನಾಟಕಕ್ಕೆ ಬಂದು ನೋಡಲಿ. ಆಡಳಿತ — ಅಭಿವೃದ್ಧಿ ಏನಾಗಿದೆ? ಎಂಬುದನ್ನು ಎಂದು ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button