Kannada NewsKarnataka NewsLatestPolitics

*ಎಲ್ರಿಗೂ ಮದ್ಯಪಾನ ಮಾಡಿಸಿ ಹಣ ತಂದುಕೊಡಿ ಅನ್ನುವ ಪ್ಲಾನ್ ಇವರದ್ದು; ಸಿದ್ದರಾಮಯ್ಯ ರಾಜಕೀಯ ಚಟ ತೀರಿಸಿಕೊಳ್ತಿದ್ದಾರೆ; ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡಿದ್ದಾರೋ ಅಥವಾ ಬಿಜೆಪಿ ಬೈಯ್ಯುವ ಭಾಷಣ ಮಾಡಿದ್ದಾರೋ ಎಂಬ ಕನ್ಫ್ಯೂಸ್ ಇದೆ. ಬಜೆಟ್ ಮಂಡಿಸಿದ್ದಕ್ಕಿಂತ ಅವರು ಬಿಜೆಪಿ ಬೈದಿದ್ದೇ ಹೆಚ್ಚು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ದೇಶದಲ್ಲಿ ಕೋವಿಡ್ ವ್ಯಾಕ್ಸಿನ್ ತಯಾರಿಸಿ ನಾವು ಎಲ್ಲರಿಗೂ ನೀಡಿದ್ದೇವೆ. ವಿದೇಶಗಳಿಗೆ ವ್ಯಾಕ್ಸಿನ್ ಕೊಟ್ಟಿದ್ದನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಭಾರತ ದ್ವೇಷಿ ರಾಹುಲ್ ಗಾಂಧಿ ರೀತಿ ಮಾತನಾಡುತ್ತಿದ್ದಾರೆ. ತುಷ್ಟೀಕರಣ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಹಿಟ್ಲರ್ ರೀತಿ ಆಡಳಿತ ಮಾಡಲು ತೀರ್ಮಾನ ಮಾಡಿದ್ದಾರೆ. ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸುತ್ತಿದ್ದಾರೆ. ಆಸ್ತಿ ದರ ಏರಿಕೆ ಮಾಡಿದ್ದಾರೆ. ಅಬಕಾರಿ ಟಾರ್ಗೆಟ್ ಕೊಟ್ಟಿದ್ದಾರೆ. ಎಲ್ಲರಿಗೂ ಮದ್ಯಪಾನ ಮಾಡಿಸಿ ಹಣ ತಂದುಕೊಡಿ ಅನ್ನುವ ಪ್ಲಾನ್ ಇವರದ್ದು. ಎನ್ ಇಪಿಗೆ ಮೊದಲು ಕಾಂಗ್ರೆಸ್ ಒಪ್ಪಿಗೆ ನೀಡಿತ್ತು. ಆದರೆ ಈಗ ಕೈ ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

10 ಕೆಜಿ ಉಚಿತ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿದರು. ಅದರಲ್ಲಿ 5 ಕೆಜಿ ಅಕ್ಕಿ ಕೊಡುತ್ತಿರುವುದು ನಾವು. ಆದರೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಬೈಯ್ಯುವುದನ್ನೇ ಕಾಯಕ ಮಾಡಿಕೊಂಡಿರುವ ಸಿದ್ದರಾಮಯ್ಯ ರಾಜಕೀಯ ಚಟ ತೀರಿಸಿಕೊಳ್ಳುತ್ತಿದ್ದಾರೆ ಎಂದು ಗುಡುಗಿದ್ದಾರೆ.

Home add -Advt

Related Articles

Back to top button