ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ಸಂಬಂಧ ಸಚಿವ ನಾಗೇಂದ್ರರನ್ನು ಬಂಧಿಸಬೇಕು ಮತ್ತು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಸಚಿವರು, ಇದೊಂದು ಬಹುದೊಡ್ಡ ಭ್ರಷ್ಟಾಚಾರ ಹಗರಣವಾಗಿದ್ದು, ಇದರ ತನಿಖೆ ಸಿಬಿಐಗೇ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸಚಿವ ನಾಗೇಂದ್ರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಮತ್ತು ಇದರಲ್ಲಿ ಸಿಎಂ ಸೇರಿದಂತೆ ಸಂಬಂಧಿಸಿದ ಎಲ್ಲರ ಮೇಲೂ ತನಿಖೆ ಆಗಬೇಕು ಎಂದು ಜೋಶಿ ಆಗ್ರಹಿಸಿದರು.
ನಿರ್ಲಜ್ಜೆಯ ಸರ್ಕಾರ: ರಾಜ್ಯ ಕಾಂಗ್ರೆಸ್ ಸರ್ಕಾರ ತೀರಾ ನಿರ್ಲಜ್ಜೆಯ ಸರ್ಕಾರವಾಗಿದೆ. ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 100 ಕೋಟಿ ರು. ಭ್ರಷ್ಟಾಚಾರ ಹಗರಣ ಬಯಲಿಗೆ ಬಂದರೂ ಇದೂವರೆಗೆ ಸಚಿವ ನಾಗೇಂದ್ರ ರಾಜೀನಾಮೆ ನೀಡಿಲ್ಲ ಎಂದು ಜೋಶಿ ಖಂಡಿಸಿದರು.
ಚುನಾವಣೆಗೆ ಬಳಸಲೆಂದೇ ಹಣ ಲೂಟಿ: ಚುನಾವಣೆಗೆ ಬಳಸಲೆಂದೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣವನ್ನು ಲೂಟಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಸರ್ಕಾರಿ ದುಡ್ಡು ಲಪಟಾಯಿಸಿ ಚುನಾವಣೆ ನಡೆಸಲು ಷಡ್ಯಂತ್ರ ನಡೆಸಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು
ಯಾವ ಕಾರಣಕ್ಕಾಗಿ ನಿಗಮದ ಹಣವನ್ನು ಮತ್ತೊಂದು ಖಾತೆಗೆ ವರ್ಗಾಯಿಸಿದರು? ಎಂಬುದಕ್ಕೆ ಸರ್ಕಾರ ಇನ್ನೂ ಉತ್ತರಿಸಿಲ್ಲ ಎಂದು ಹರಿಹಾಯ್ದರು.
ಇದೊಂದು ಬಹುದೊಡ್ಡ ಹಗರಣವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಪಾರದರ್ಶಕ ತನಿಖೆ ನಡೆಯುವುದು ಅನುಮಾನ. ಅಲ್ಲದೇ ಎಂ, ಯುನಿಯನ್ ಬ್ಯಾಂಕ್ ಕೆಲ ಅಧಿಕಾರಿಗಳೂ ಇದರಲ್ಲಿ ಇರುವುದರಿಂದ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೇ ವಹಿಸಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ