ಕಾಲು -ಬಾಯಿಗೆ ಬೀಗ ಹಾಕಿದ ಪ್ರಹ್ಲಾದ ಜೋಶಿ; ಒಂದೇ ಕಾರಿನಲ್ಲಿ ತೆರಳಿದ ಲಕ್ಷ್ಮಣ ಸವದಿ – ರಮೇಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಜಿಲ್ಲಾ ಬಣ ರಾಜಕೀಯ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಮಂಗಳವಾರ ಬೆಳಗಾವಿಯಲ್ಲಿ ಸಭೆ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ ಜೊಶಿ ಎಲ್ಲ ಮುಖಂಡರ ಕಾಲು ಮತ್ತು ಬಾಯಿಗೆ ಬೀಗ ಹಾಕುವ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ನಡೆದ ಸಭೆಯಲ್ಲಿ ರಮೇಶ ಜಾರಕಿಹೊಳಿ ಕುರಿತಂತೆ ಅಭಯ ಪಾಟೀಲ, ಈರಣ್ಣ ಕಡಾಡಿ, ಶಶಿಕಲಾ ಜೊಲ್ಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಪ್ರತ್ಯುತ್ತರ ನೀಡಲು ಮುಂದಾದಾಗ ತೀವ್ರ ಗದ್ದಲವೇರ್ಪಟ್ಟು ಬೆಳಗಾವಿಯಲ್ಲೇ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವಂತೆ ಪ್ರಹ್ಲಾದ ಜೊಶಿ ಅವರಿಗೆ ಜವಾಬ್ದಾರಿ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಾವಿಯಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆ ಆರಂಭಿಸಿದ ಜೋಶಿ, ಯಾರೂ ಮಾಧ್ಯಮಗಳ ಮುಂದೆ ಆಂತರಿಕ ವಿಷಯ ಮಾತನಾಡಬಾರದು ಎಂದು ಎಲ್ಲರ ಬಾಯಿಗೆ ಬೀಗ ಹಾಕುವ ಪ್ರಯತ್ನ ಮಾಡಿದರು. ಹಾಗೆಯೇ ಯಾರೂ ಒಬ್ಬರ ಕ್ಷೇತ್ರಕ್ಕೆ ಇನ್ನೊಬ್ಬರು ಹೋಗಬಾರದು, ಏನೇ ಇದ್ದರೂ ಹೈಕಮಾಂಡ್ ಮುಂದೆ ಹೇಳಬೇಕು ಎಂದು ಕಾಲಿಗೂ ಬೀಗ ಹಾಕುವ ಪ್ರಯತ್ನ ಮಾಡಿದರು.
ಇನ್ನು ಮಂದೆ ಯಾರೂ ಒಬ್ಬರ ವಿರುದ್ಧ ಮತ್ತೊಬ್ಬರು ಆರೋಪ ಪ್ರತ್ಯಾರೋಪ ಮಾಡಬಾರದು. ನೀವಷ್ಟೇ ಅಲ್ಲ, ನಿಮ್ಮ ತಮ್ಮಂದಿರೂ ಮಾತನಾಡಬಾರದು, ನಿಮ್ಮ ಮಕ್ಕಳೂ ಮಾತನಾಡಬಾರದು ಎಂದು ಖಡಕ್ಕಾಗಿ ಸೂಚಿಸಿದರು. ಹಾದಿ ಬೀದಿಯಲ್ಲಿ ಮಾತನಾಡುವುದನ್ನು ಎಲ್ಲರೂ ನಿಲ್ಲಿಸಿ. ಅವರವರ ಕ್ಷೇತ್ರವನ್ನು ಅವರವರು ನೋಡಿಕೊಳ್ಳಬೇಕು. ಬೇರೆಯವರ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದಾಗಲಿ, ಇನ್ನೊಬ್ಬರ ಪರವಾಗಿ ಲಾಬಿ ಮಾಡುವುದಾಗಿ ಅಗತ್ಯವಿಲ್ಲ. ಹೈಕಮಾಂಡ್ ಗಮನದಲ್ಲಿ ಎಲ್ಲವೂ ಇದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಾದ ನಂತರ ಬೆಳಗಾವಿ ಮಹಾನಗರ, ಬೆಳಗಾವಿ ಗ್ರಾಮೀಣ ಹಾಗೂ ಚಿಕ್ಕೋಡಿ ಎಂದು ಮೂರು ವಿಭಾಗಗಳನ್ನಾಗಿ ಮಾಡಿ ಪ್ರತ್ಯೇಕವಾಗಿ ಒಬ್ಬೊಬ್ಬ ಮುಖಂಡರನ್ನೂ ಕರೆದು ಸುದೀರ್ಘವಾಗಿ ಪ್ರಹ್ಲಾದ ಜೋಶಿ ಚರ್ಚೆ ನಡೆಸಿದರು. ಎಲ್ಲರೂ ಅಭಿಪ್ರಾಯಗಳನ್ನು ನೀಡಿದರು. ಇಡೀದಿನ ಸಭೆ ನಡೆಸಿದರೂ ಎಲ್ಲರೂ ಆರೋಪ- ಪ್ರತ್ಯಾರೋಪ, ಗಲಾಟೆ ನಡೆಯದಂತೆ ನೋಡಿಕೊಂಡರು.
ನಂತರ ತಮ್ಮದೇ ಕಾರಿನಲ್ಲಿ ಲಕ್ಷ್ಮಣ ಸವದಿ ಮತ್ತು ರಮೇಶ ಜಾರಕಿಹೊಳಿ ಅವರನ್ನು ಕೂಡ್ರಿಸಿಕೊಂಡು ಹುಬ್ಬಳ್ಳಿಗೆ ತೆರಳಿದ ಪ್ರಹ್ಲಾದ ಜೋಶಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋದರು. ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರ ಸಮಸ್ಯಾತ್ಮಕ ಕ್ಷೇತ್ರಗಳ ಕುರಿತು ಚರ್ಚೆ ಮುಂದುವರಿಯಲಿದೆ.
ಬೆಳಗಾವಿಯಲ್ಲಿ ಮಾತನಾಡಿದ ಪ್ರಹ್ಲಾದ ಜೋಶಿ, ಏಪ್ರಿಲ್ 8 -9 ರಂದು ನವದೆಹಲಿಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಸಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಯಾವುದೇ ಗೊಂದಲ ನಮ್ಮಲ್ಲಿಲ್ಲ. ಎಲ್ಲವೂ ಸುಗಮವಾಗಿ ನಡೆಯಲಿದೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಎಲ್ಲ ಸಂಸದರು, ಶಾಸಕರು, ಮಾಜಿ ಸಚಿವರು, ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಾರದಿರುವ ಕುರಿತು ಪ್ರಹ್ಲಾದ ಜೋಶಿ ಪ್ರಶ್ನಿಸಿದರು. ಅವರು ಬೆಂಗಳೂರಿನಲ್ಲಿ ಕೆಎಎಫ್ ಸಂಬಂಧಿತ ಕೆಲಸವಿರುವುದರಿಂದ ಬರಲಿಲ್ಲ ಎಂದು ಮಾಹಿತಿ ನೀಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ