*60 ವರ್ಷದ ಮಹಿಳೆ ಮೇಲೆ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ದೃಢ: ಮಾಜಿ ಸಂಸದ ಕರಾಳ ಮುಖ ಬಯಲು*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ 60 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದು ದೃಢವಾಗಿದೆ ಎಂದು ಎಸ್ ಐಟಿ ಸಲ್ಲಿಸಿರುವ ಎರಡನೇ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಅಶ್ಲೀಲ ವಿಡಿಯೋ ಕೇಸ್, ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ ಐಟಿ ಎರಡನೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಚಾರ್ಜ್ ಶೀಟ್ ನಲ್ಲಿರುವ ಕೆಲ ಮಾಹಿತಿ ಲಭ್ಯವಾಗಿದ್ದು, ಪ್ರಜ್ವಲ್ ನ ನೀಚ ಕೃತ್ಯಗಳು ಬಯಲಾಗಿವೆ.
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಎಸ್ ಐಟಿ 113 ಸಾಕ್ಷಿಗಳನ್ನು ಒಳಗೊಂಡಿರುವ 1632 ಪುಟಗಳ ಚಾರ್ಜ್ ಶೀಟ್ ನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ 60 ವರ್ಷದ ಮನೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆಯನ್ನು ಹೆದರಿಸಿ ಹಲವುಬಾರಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದು ದೃಧವಾಗಿದೆ. ಕೃತ್ಯದ ವೇಳೆ ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿದ್ದಾನೆ. ಸಂತ್ರಸ್ತೆ ಕೈ ಮುಗಿದು ನಿಮ್ಮ ತಾತ ಹಾಗೂ ತಂದೆಗೆ ಊಟಬಡಿಸಿದ್ದೇನೆ ದಯವಿಟ್ಟು ಬಿಟ್ಟು ಬಿಡು ಎಂದು ಅಂಗಲಾಚಿ ಬೇಡಿದರೂ ಪ್ರಜ್ವಲ್ ಆಕೆಯನ್ನು ಬಿಟ್ಟಿಲ್ಲ. ಸಂತ್ರಸ್ತೆ ಕಣ್ಣೀರಿಟ್ಟು ಗೋಗರೆದರೂ ಬಿಡದೇ ದೌರ್ಜನ್ಯವೆಸಗಿರುವುದು ಸಾಬೀತಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.