Karnataka NewsLatestPolitics

*ಕಬ್ಬು ಬೆಳೆಗಾರರ ಸಮಸ್ಯೆ*: *ಸಿಎಂ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಖರೀದಿ, ಕಟಾವು, ಸಾಗಣೆ ಹಾಗೂ ಸಕಾಲಿಕ ಪಾವತಿಗಳಲ್ಲಿ ನ್ಯಾಯಸಮ್ಮತ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ರ ಬರೆದು ಆಗ್ರಹಿಸಿದ್ದೇನೆ.

ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ವಾರ್ಷಿಕ ಪರಿಷ್ಕರಣೆ, ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಎಥೆನಾಲ್ ನೀತಿ ಮಧ್ಯಸ್ಥಿಕೆಗಳು, ಎಥೆನಾಲ್ ಬಡ್ಡಿ ಸಹಾಯಧನ ಯೋಜನೆಯಡಿ (Ethanol Interest Subvention Scheme) ಆರ್ಥಿಕ ನೆರವು ಮತ್ತು ರೈತರು, ಸಕ್ಕರೆ ಕಾರ್ಖಾನೆಗಳು ಹಾಗೂ ಇತರ ಪಾಲುದಾರರ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಮೂಲಕ ರೈತರ ಹಿತಾಸಕ್ತಿಗಳನ್ನು ಕಾಪಾಡಲು ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.

ಸಕ್ಕರೆ ಕ್ಷೇತ್ರವನ್ನು ಬಲಪಡಿಸಲು ಮತ್ತು ನಮ್ಮ ಅನ್ನದಾತರನ್ನು ರಕ್ಷಿಸಲು ಕೇಂದ್ರ ಸರ್ಕಾರವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಾಗ, ಕರ್ನಾಟಕ ಸರ್ಕಾರವೂ ಸಹ ತ್ವರಿತ ಆಡಳಿತಾತ್ಮಕ ಮತ್ತು ಆರ್ಥಿಕ ಕ್ರಮಗಳ ಮೂಲಕ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಾಮರ್ಥ್ಯ ಹೊಂದಿರುವುದನ್ನು ಕೇಂದ್ರ ಸರ್ಕಾರ ಖಚಿತಪಡಿಸಿದೆ. ಕೇಂದ್ರ ಸರ್ಕಾರ ಕೈಗೊಂಡ ರೈತಪರ ಕ್ರಮಗಳ ಪರಿಣಾಮವಾಗಿ, 2024-25ನೇ ಸಕ್ಕರೆ ಹಂಗಾಮಿನವರೆಗಿನ ಕಬ್ಬಿನ ಬಾಕಿ ಮೊತ್ತದಲ್ಲಿ ಸುಮಾರು ಶೇ.99.8ರಷ್ಟು ಪಾವತಿಸಲಾಗಿದೆ. ಹಿಂದಿನ 2025-26ನೇ ಸಕ್ಕರೆ ಹಂಗಾಮಿನಲ್ಲಿ ಪಾವತಿಸಬೇಕಿದ್ದ ಒಟ್ಟು 1,14,958 ಕೋಟಿ ರೂ. ಕಬ್ಬಿನ ಬಾಕಿ ಮೊತ್ತದಲ್ಲಿ ಸುಮಾರು 1,13,325 ಕೋಟಿ ರೂ. ಪಾವತಿಸಲಾಗಿದೆ. ಈ ಮೂಲಕ ಶೇ.99.6ರಷ್ಟು ಬಾಕಿ ಪಾವತಿ ಪೂರ್ಣಗೊಂಡಿದ್ದು, ಕಬ್ಬಿನ ಬಾಕಿ ಮೊತ್ತವು ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ಸಕ್ಕರೆ ವಲಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಮಹಾರಾಷ್ಟ್ರದಂತಹ ಇತರ ರಾಜ್ಯಗಳ ಮಾದರಿಯಲ್ಲಿ ಸಹ-ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ವಿದ್ಯುತ್ ಖರೀದಿ /ವಿದ್ಯುತ್ ಮಾರಾಟ ಒಪ್ಪಂದ ಮಾಡಿಕೊಳ್ಳುವ ಬಗ್ಗೆಯೂ ರಾಜ್ಯ ಸರ್ಕಾರ ಪರಿಶೀಲಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Related Articles

Back to top button