ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 2022ರ ಜು.26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದ ಹಿಂದೂ ಕಾರ್ಯಕರ್ತ ಪ್ರವೀಣ ನೆಟ್ಟಾರು ಕೊಲೆ ಪ್ರಕರಣದ ಹಿಂದಿನ ಮತ್ತೊಂದು ಸ್ಫೋಟಕ ಮಾಹಿತಿಯನ್ನು ಎನ್ಐಎ ಬಹಿರಂಗಪಡಿಸಿದೆ.
2047ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ಜಾರಿಗೊಳಿಸುವ ಗುರಿಯೊಂದಿಗೆ ನಡೆಸಿದ್ದ ಕಾರ್ಯಾಚರಣೆ ಒಂದು ಭಾಗವೇ ಪ್ರವಿಣ ನೆಟ್ಟಾರು ಕೊಲೆ ಪ್ರಕರಣ ಎಂದು ಎನ್ಐಎ ಮಾಹಿತಿ ಹೊರಹಾಕಿದೆ. ಇದಲ್ಲದೆ ಮಸೂದ್ ಕೊಲೆಗೆ ಪ್ರತೀಕಾರವಾಗಿಯೂ ಪ್ರವೀಣ ಅವರನ್ನು ಹತ್ಯೆ ಮಾಡಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.
ಭಾರತವನ್ನು 2047ರ ವೇಳೆ ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವಾಗಿಸುವ ಗುರಿಯೊಂದಿಗೆ ದೇಶದಲ್ಲಿ ಆಂತರಿಕವಾಗಿ ಶಾಂತಿ ಕದಡಿ, ಹಿಂದೂ ಸಮುದಾಯದಲ್ಲಿ ಭಯ ಹುಟ್ಟಿಸುವ ಉದ್ದೇಶದ ಒಂದು ಹಂತವನ್ನು ಪೂರೈಸುವಲ್ಲಿ ಪಿಎಫ್ಐ ಯಶಸ್ವಿಯಾಗಿತ್ತು ಎಂಬುದು ಈಗಾಗಲೇ ಬಂಧಿತ ಆರೋಪಿಗಳು ತನಿಖೆ ವೇಳೆ ನೀಡಿದ ಮಾಹಿತಿಯಿಂದ ಹೊರಬಿದ್ದಿದೆ.
ಸಮುದಾಯದಲ್ಲಿ ಬೆದರಿಕೆ ಹುಟ್ಟಿಸಲು ಪಿಎಫ್ಐ ವ್ಯಕ್ತಿಗಳನ್ನು ಕೊಲ್ಲಲು ರಹಸ್ಯ ‘ಹಿಟ್ ಸ್ಕ್ವಾಡ್’ ಗಳನ್ನು ರಚಿಸಿಕೊಂಡಿತ್ತು. ಪ್ರಕರಣದಲ್ಲಿ ಬಂಧಿತ ಅರೋಪಿ ತುಫೈಲ್ ಕೊಡಗು ಜಿಲ್ಲೆಯ ಪಿಎಫ್‌ಐ ಸೇವಾ ತಂಡಗಳ ಉಸ್ತುವಾರಿಯಾಗಿದ್ದ. ಜೊತೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿ ನೀಡುವ ಮಾಸ್ಟರ್ ಟ್ರೈನರ್ ಅಗಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಫ್ರೀಡಂ ಸಮುದಾಯ ಭವನದಲ್ಲಿ ಉಡುಪಿಯ ಕಾರ್ಯಕರ್ತರು ಇದ್ದು ಪ್ರವೀಣ್ ಹತ್ಯೆ ನಡೆಸಲು ಅಂತಿಮ ಯೋಜನೆ ಸಿದ್ಧಪಡಿಸಲಾಗಿತ್ತು. ಕೊಡಗು, ಮೈಸೂರು ಜಿಲ್ಲೆಗಳು ಹಾಗೂ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಮಾಡಿದ್ದ ಮೂವರು ಆರೋಪಿಗಳಿಗೆ ಆಶ್ರಯ ನೀಡಲಾಗಿತ್ತು. ಪುತ್ತೂರು ಪಿಎಫ್‌ಐ ಜಿಲ್ಲಾಧ್ಯಕ್ಷನಾಗಿದ್ದ ಆರೋಪಿ ಮಹಮ್ಮದ್ ಜಾಬಿರ್ ಇದರ ಉಸ್ತುವಾರಿ ವಹಿಸಿದ್ದು, ಕೊಲೆಗೂ ಮೊದಲು ನಡೆಸಿದ್ದ ಸಭೆಯೊಂದರಲ್ಲಿ ಪಾಲ್ಗೊಂಡು ಸ್ಕೆಚ್ ಹಾಕಿದ್ದ. ಮಸೂದ್ ಹತ್ಯೆಗೆ ಪ್ರತೀಕಾರ ಪಡೆಯುವ ಬಗ್ಗೆಯೂ ಸಭೆಯಲ್ಲಿ ಘೋಷಿಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ