Belagavi NewsBelgaum NewsEducationKarnataka NewsLatest

*ಮಕ್ಕಳ ಕಲಿಕೆಗೆ ಪ್ರಯತ್ನ ನೆರವು: ವಿಜ್ಞಾನ ಉಪಕರಣಗಳ ದೇಣಿಗೆ* *ಈಗಿನ ಮಕ್ಕಳ​ಲ್ಲಿ ಏಕಾಗ್ರತೆ ಮತ್ತು ಪಾಠದಲ್ಲಿ ​ತಾದ್ಯಾತ್ಮತೆ ಕಡಿಮೆಯಾಗುತ್ತಿದೆ: ಶಿರೀಶ್ ಜೋಶಿ*  

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ​ಈಗಿನ ಮಕ್ಕಳ​ಲ್ಲಿ ಏಕಾಗ್ರತೆ ಮತ್ತು ಪಾಠದಲ್ಲಿ ​ತಾದ್ಯಾತ್ಮತೆ ಕಡಿಮೆಯಾಗುತ್ತಿದೆ​ ಎಂದು ಹಿರಿಯ ಸಾಹಿತಿ, ನಾಟಕ ನಿರ್ದೇಶಕ ಶಿರೀಶ್ ಜೋಶಿ ಹೇಳಿದರು.

​ಭಾರತ ನಗರ ಸರಕಾರಿ ಶಾಲೆಗೆ ಪ್ರಯತ್ನ ಸಂಘಟನೆ ಕೊಡಮಾಡಿದ ವಿತ್ರಾನ ಉಪಕರಣಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. 

​ವಿದ್ಯಾರ್ಥಿಗಳು ಈ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ಕೋರಿದ​ ಅವರು​, ತಂತ್ರಜ್ಞಾನ, ವಿಶೇಷವಾಗಿ ಮೊಬೈಲ್ ಫೋನ್ ಬಳಕೆ ಹೆಚ್ಚುತ್ತಿರುವ ಕಾರಣ ಮಕ್ಕಳ​ಲ್ಲಿ ವೈಜ್ಞಾನಿಕ ವಿಚಾರಧಾರೆ ಮತ್ತು ಮನೋಭಾವ ಬೆಳೆಸುವುದು ಬಹಳ ಅಗತ್ಯವಾಗಿದೆ.  ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಮಕ್ಕಳು ಹೊಸದೇನನ್ನಾದರೂ ಕಲಿತು, ಭವಿಷ್ಯದ ವಿಜ್ಞಾನಿಗಳಾಗಬೇಕು ಎಂದು​ ಕರೆ ನೀಡಿದರು.

ಪ್ರಯತ್ನ ಸಂಘಟನೆಯ ಅಧ್ಯಕ್ಷೆ ಶಾಂತಾ ಆಚಾರ್ಯ, ಉಪಕರಣಗಳ ಕೊಡುಗೆಯ ಹಿಂದಿನ ಉದ್ದೇಶವನ್ನು ವಿವರಿಸಿದರು. ಮಕ್ಕಳು ಕೇವಲ ಪಠ್ಯಪುಸ್ತಕಗಳ ಜ್ಞಾನಕ್ಕೆ ಸೀಮಿತರಾಗದೆ, ಪ್ರಯೋಗಶೀಲರಾಗಬೇಕು.  ಕುತೂಹಲ ಬೆಳೆಸಿಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ಉಪಕರಣಗಳು ಅವರಿಗೆ ಆ ಜ್ಞಾನವನ್ನು ಬೆಳೆಸಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.

Home add -Advt

ಕಾರ್ಯಕ್ರಮವನ್ನು ನಿರೂಪಿಸಿದ ಶಿಕ್ಷಕಿ ಸುಮಂಗಲಾ ಸಂಗಳದ ವಿಜ್ಞಾನ ಕಲಿಕೆಯಲ್ಲಿ ಪ್ರಾಯೋಗಿಕ ಉಪಕರಣಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದರು. ವೈಜ್ಞಾನಿಕ ಮನೋಭಾವ ಬೆಳೆಸಲು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಯು ಅತ್ಯಗತ್ಯ. ನಮ್ಮ ಶಾಲೆ ಈ ಉಪಕರಣಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವ ಭರವಸೆ ನೀಡುತ್ತದೆ. ವಿದ್ಯಾರ್ಥಿಗಳು ವಿಜ್ಞಾನವನ್ನು ಆಸಕ್ತಿಯಿಂದ ಕಲಿಯಲು ಇದು ಸಹಾಯಕವಾಗುತ್ತದೆ ಎಂದು ನುಡಿದರು. ​ 

ವ್ಯಾಕರಣವಿಲ್ಲದೆ ಭಾಷೆ ಇಲ್ಲ, ಸೂತ್ರಗಳಿರದೆ ಗಣಿತವಿಲ್ಲ, ವಿಜ್ಞಾನ ಉಪಕರಣಗಳಿಲ್ಲದೆ ವಿಜ್ಞಾನವಿಲ್ಲ​.​ ನೋಡಿ ​ತಿಳಿ, ಮಾಡಿ ​ಕಲಿ ಎನ್ನುವುದಕ್ಕೆ ಸಂಪೂರ್ಣ ಅವಕಾಶವಿರುವುದು​  ವಿಜ್ಞಾನ ವಿಷಯದಲ್ಲಿ ಮಾತ್ರ. ಭಾಷೆಯಲ್ಲಿ ಭಾವನಾ ಲೋಕವಿದೆ, ಕನಸಿನ ಲೋಕವಿದೆ​. ಏನೇ ಕಲ್ಪಿಸಿಕೊಂಡರು ಅದು ಭಾವನಾತ್ಮಕವಾಗಿ ದೃಶ್ಯವನ್ನು ಬಿತ್ತರಿಸಬಲ್ಲದು,​ ಕನಸಿನ ಲೋಕದಲ್ಲಿ ಕನವರಿಸಬಹುದು​. ಆದರೆ ವಿಜ್ಞಾನ ಮಾತ್ರ ಸದಾ ವಾಸ್ತವಿಕ ಮತ್ತು ಪ್ರಾಯೋಗಿಕವಾಗಿರುವುದನ್ನೇ ನಂಬುತ್ತದೆ ಹಾಗೂ ಪ್ರಮಾಣಿಕರಣದೊಂದಿಗೆ ಪ್ರಸ್ತುತ ಪಡಿಸುತ್ತದೆ. ಇಂತಹ ಪ್ರಾಯೋಗಿಕ ಜ್ಞಾನವನ್ನು ನೀಡಲು ವಿಜ್ಞಾನ ಉಪಕರಣ ಹಾಗೂ ಅದರ ಉಪಯೋಗ ಮಹತ್ವ ಪಡೆದಿದೆ​ ಎಂದು ಅವರು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ  ಜಿ ಆರ್ ಗೌಡರ  ತಮ್ಮ ಧನ್ಯವಾದಗಳನ್ನು ಅರ್ಪಿಸುತ್ತಾ, ಈ ಮಹತ್ವದ ​ದೇಣಿಗೆ ನಮ್ಮ ಶಾಲೆಯ ವಿಜ್ಞಾನ ಶಿಕ್ಷಣವನ್ನು ಮತ್ತಷ್ಟು ಮುಂದಕ್ಕೆ ಒಯ್ಯುತ್ತದೆ. ಈ ಉಪಕರಣಗಳು ವಿದ್ಯಾರ್ಥಿಗಳಿಗೆ ಕೇವಲ ಶಬ್ದಾತ್ಮಕ ಕಲಿಕೆಯನ್ನೇ ಅಲ್ಲ, ಪ್ರಾಯೋಗಿಕ ಜ್ಞಾನವನ್ನೂ ನೀಡಲು ಬಹಳ ಸಹಾಯಕವಾಗಲಿದೆ ಎಂದು ನುಡಿದರು.

 ಕಾರ್ಯಕ್ರಮದ ಅವಧಿಯಲ್ಲಿ, ವಿದ್ಯಾರ್ಥಿಗಳು ಹೊಸ ಉಪಕರಣಗಳನ್ನು ಪರಿಶೀಲಿಸಿ, ಮೈಕ್ರೋಸ್ಕೋಪ್ ಬಳಸಿ ಸೂಕ್ಷ್ಮ ಜೀವಿಗಳನ್ನು ಅಧ್ಯಯನ ಮಾಡುವುದು,  ರಸಾಯನಿಕ ಪರಿಕರಗಳೊಂದಿಗೆ ಪ್ರಾಯೋಗಿಕ ಪ್ರಯೋಗಗಳನ್ನು ಮಾಡುವುದು ಮೊದಲಾದ ವಿಚಾರಗಳಲ್ಲಿ ತಮ್ಮ ಕುತೂಹಲವನ್ನು ತೋರಿಸಿದರು.

​ ಪ್ರಯತ್ನ ಸಂಘಟನೆಯ ​ಸದಸ್ಯರಾದ ಸಂಗೀತಾ ಪಾಟೀಲ, ವರದಾ ಭಟ್, ಮಂಗಲಾ ಧಾರವಾಡಕರ್, ಬೀನಾ ರಾವ್, ಶ್ವೇತಾ ಬಿಜಾಪುರೆ, ಪದ್ಮಾ ವೆರ್ಣೇಕರ್, ಸುಮಾ ಹೊಂಡದ​,​ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 ​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button