ಪ್ರಗತಿವಾಹಿನಿ ಸುದ್ದಿ: ರಾಜ್ಯ ಸೇರಿದಂತೆ ದೇಶದ ಉದ್ದಗಲಕ್ಕೂ ಸಾಕಷ್ಟು ಕೊಳವೆ ಬಾವಿ ದುರಂತಗಳು ಇದುವರೆಗೂ ಸಂಭವಿಸಿದ್ದು, ಈ ರೀತಿಯ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರ ಕಠಿಣ ನಿಯಮ ಜಾರಿಗೆ ತಂದಿದೆ.
ಜಮೀನಿನಲ್ಲಿ ಕೊಳವೆ ಬಾವಿ ಕೊರೆದು, ನೀರು ಬಾರದ ಪಕ್ಷದಲ್ಲಿ ಅದನ್ನು ಮುಚ್ಚದೇ ಹಾಗೇ ಬಿಡುವವರ ವಿರುದ್ಧ ಸರ್ಕಾರ ಕಾನೂನಿನ ಚಾಟಿ ಬೀಸಲು ಮುಂದಾಗಿದೆ. ಇನ್ಮುಂದೆ ಕೊಳವೆ ಬಾವಿ ಕೊರೆದು ಮುಚ್ಚದೇ ಇದ್ದರೇ ಒಂದು ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡವನ್ನು ವಿಧಿಸುವ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಈ ಕುರಿತ ವಿಧೇಯಕಕ್ಕೆ ತಿದ್ದುಪಡಿ ತರಲು ಅನುಮೋದಿಸಿ ಮುಂಬರುವ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದಿಸಿದೆ.
ಈ ವಿಧೇಯಕದ ಪ್ರಕಾರವಾಗಿ, ಕೊಳವೆ ಬಾವಿ ತೆರೆದು ಮುಚ್ಚದಿದ್ದ ಪಕ್ಷದಲ್ಲಿ ಒಂದು ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಲಾಗುತ್ತದೆ. ಇನ್ನು ಅಂತರ್ಜಲ ನಿಯಮ ಉಲ್ಲಂಘಿಸುವವರಿಗೆ 5 ಸಾವಿರ ದಂಡ ಮತ್ತು 3 ತಿಂಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗುತ್ತಾರೆ. ಜೊತೆಗೆ ಕೊಳವೆ ಬಾವಿ ಕೊರೆಯುವ ಸಂಸ್ಥೆ ಅಥವಾ ಭೂ ಮಾಲಿಕರು ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದ್ದಲ್ಲಿ ಒಂದು ವರ್ಷದ ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ