ಪ್ರಗತಿವಾಹಿನಿ ಸುದ್ದಿ: ವೈದ್ಯರ ನಿರ್ಲಕ್ಷ್ಯಕ್ಕೆ ನಾಲ್ಕು ತಿಂಗಳ ಗರ್ಭಿಣಿ ಮೃತಪಟ್ಟಿದ್ದಾಳೆ ಎನ್ನುವ ಆರೋಪ ಕುಟುಂಬಸ್ಥರು ಮಾಡಿದ್ದಾರೆ.
ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದ ಆರತಿ ಚವ್ಹಾಣ್ (32) ಮೃತಪಟ್ಟ ಗರ್ಭಿಣಿ. ಮಂಗಳವಾರ ಬೆಳಗ್ಗೆ ಹೊಟ್ಟೆ ನೋವು ಎಂದು ಇಲ್ಲಿನ ಗೊಂದಳಿ ಗಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. 25 ಸಾವಿರ ಹಣ ಕಟ್ಟಿಸಿಕೊಂಡು ಇಂದು ಬೆಳಗ್ಗೆ 11ಗಂಟೆಗೆ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಮಾಡಿದ್ದರು. ಈ ವೇಳೆ ನಾಲ್ಕು ತಿಂಗಳ ಶಿಶು ಇದೆ ಎಂದು ವೈದ್ಯರು ಒಮ್ಮೆ ಹೇಳಿದ್ದರು.
ಬಳಿಕ ಸ್ವಲ್ಪ ಹೊತ್ತಿನ ಬಳಿಕ ಆರು ತಿಂಗಳ ಕೂಸಿದೆ ಎಂದು ಹೇಳಿ ಆಪರೇಷನ್ ಮಾಡಿದ್ದರು. ಆದರೂ ಮಧ್ಯಾಹ್ನ 2ಗಂಟೆ ವೇಳೆಗೆ ಮತ್ತೆ ಹೊಟ್ಟೆನೋವು ಹೆಚ್ಚಾಗಿದ್ದು, ಆರತಿ ಪರದಾಡಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರದೇ ನರ್ಸ್ ಗಳೇ ಚಿಕಿತ್ಸೆ ನೀಡಿದ್ದರು. ಸಂಜೆ ಐದು ಗಂಟೆಗೆ ವೈದ್ಯರು ಬಂದು ನೋಡಿದಾಗ ಬಿಪಿ ಲೋ ಆಗಿದೆ. ರೋಗಿ ಸ್ಥಿತಿ ಗಂಭೀರವಾಗಿದೆ ಎಂದು ತರಾತುರಿಯಲ್ಲಿ ಕೆಎಲ್ಇ ಆಸ್ಪತ್ರೆಗೆ ರವಾನೆ ಮಾಡಿದ್ದರು. ಕೆಎಲ್ಇ ಆಸ್ಪತ್ರೆಗೆ ಶಿಫ್ಟ್ ಮಾಡುವಾಗ ಮಾರ್ಗ ಮಧ್ಯದಲ್ಲಿ ಆರತಿ ಮೃತಪಟ್ಟಿದ್ದಾಳೆ. ಆಸ್ಪತ್ರೆಯಲ್ಲಿ ಮೂರು ಗಂಟೆಗಳ ಕಾಲ ರೋಗಿ ನರಳಿದ್ರೂ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆಸ್ಪತ್ರೆ, ವೈದ್ಯರ ವಿರುದ್ಧ ಆರತಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಡೇಬಜಾರ್ ಪೊಲೀಸ್ ಠಾಣೆ ಬಳಿ ಜಮಾವಣೆಯಾದ ಕುಟುಂಬಸ್ಥರು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ದೂರು ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ