ಕುಡಿಯುವ ನೀರಿನ ಸಮಸ್ಯೆ ನಿಗಿಸಲು ಸಿದ್ಧತೆ ಮಾಡಿಕೊಳ್ಳಿ – ರಾಹುಲ್ ಶಿಂಧೆ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ತಾಲೂಕಿನಲ್ಲಿ ಮೂರು ಬಹುಗ್ರಾಮ ಯೋಜನೆಯಡಿ ಈಗಾಗಲೇ 187 ಹಳ್ಳಿಗಳಿಗೆ ನೀರನ್ನು ಪೂರೈಸುತ್ತಿದ್ದು, ಬೇಸಿಗೆ ಸಮಯದಲ್ಲಿ ನೀರನ ತೊಂದರೆ ಆಗದಂತೆ ಗ್ರಾಪಂಗಳಲ್ಲಿ ಸರಕಾರಿ ಬೋರ್ ವೆಲ್ಗಳನ್ನು ರಿಪೇರಿ ಮಾಡಿಸಬೇಕು. ಖಾಸಗಿ ಬೋರ್ ವೆಲ್ಗಳ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡು ತುರ್ತು ಸಮಯದಲ್ಲಿ 24 ಗಂಟೆಯೊಳಗೆ ನೀರನ್ನು ಒದಗಿಸಲು ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚಿಸಿದರು.
ಹುಕ್ಕೇರಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಪಂಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲು ಈಗಾಗಲೇ ಟ್ಯಾಂಕರ್ ಗಳು ಲಭ್ಯವಿದ್ದು, ಅವುಗಳಿಗೆ ಇಂಜಿನ್ ಗಳನ್ನು ಟ್ರಿಪ್ ಪ್ರಕಾರ ಟೆಂಡರ್ ಕರೆಯಲು ತಹಶೀಲ್ದಾರ್ ಹಾಗೂ ತಾಪಂ ಇಒ ಅವರು ತಯಾರಿಯಲ್ಲಿ ಇರಬೇಕು ಎಂದು ತಿಳಿಸಿದರು.
ಕಣಗಲಾ ಬಹುಗ್ರಾಮ ಯೋಜನೆಯಡಿ ಹಿರಣ್ಯಕೇಶಿ ನದಿಯಿಂದ ನೀರು ಪೂರೈಸುತ್ತಿದ್ದು, ಬೇಸಿಗೆಯಲ್ಲಿ ನದಿ ಬತ್ತುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈಮಲ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಯಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ಎಸ್.ಡಿ.ಆರ್.ಎಫ್.ನಲ್ಲಿ ಲಭ್ಯವಿರುವ ಅನುದಾನದಲ್ಲಿ ಶಾಸಕ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಭೆ ಕರೆದು ಆ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುವ ಬಗ್ಗೆ ಪ್ರಸ್ತಾವಣೆಗಳನ್ನು ಸಲ್ಲಿಸಿ, ಅನುಮೋದನೆ ಪಡೆದುಕೊಳ್ಳುವಂತೆ ಸೂಚಿಸಿದರು.
ಬೆಣಿವಾಡದಲ್ಲಿ ಆರೋಗ್ಯ ಅಧಿಕಾರಿ ಹುದ್ದೆ ಖಾಲಿರುವ ಬಗ್ಗೆ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಎರಡು ದಿನಗಳಲ್ಲಿ ಹುದ್ದೆ ತುಂಬಲು ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
ತಾಲೂಕಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಎಲ್ಲಾ ಬಿಲ್ಲುಗಳನ್ನು ನೇರವಾಗಿ ಜಿಲ್ಲಾ ಪಂಚಾಯತಿಗೆ ಕಳುಹಿಸದೆ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸಿ ಜಿಲ್ಲಾ ಪಂಚಾಯತಿಗೆ ಸಲ್ಲಿಸಲು ಸೂಚಿಸಿದರು.
ಇದೇ ವೇಳೆ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಸಭೆ ನಡೆಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಯಶಸ್ವಿಗೊಳಿಸಬಹುದು ಎಂದು ತಿಳಿಸಿದರು.
ಬಳಿಕ ಹುಕ್ಕೇರಿಯ ಎಸ್.ಕೆ. ಹೈಸ್ಕೂಲ್ ನಲ್ಲಿ ಹಾಗೂ ಯಮಕನಮರಡಿ ವಿಧಾನ ಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾಸ್ಟರಿಂಗ್, ಡಿಮಾಸ್ಟರಿಂಗ್ ಹಾಗೂ ಸ್ಟ್ರಾಂಗ್ ರೂಮ್ ಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲ್ಲಶೆಟ್ಟಿ, ತಹಶೀಲ್ದಾರ ಬಲರಾಮ ಕಟ್ಟಿಮನಿ, ತಾಪಂ ಇಒ ಟಿ.ಆರ್. ಮಲ್ಲಾಡದ, ಸಹಾಯಕ ನಿರ್ದೇಶಕರಾದ ಲಕ್ಷ್ಮೀನಾರಾಯಣ ಪಿ., ರಾಜು ಢಂಗೆ, ತಾಲೂಕಾ ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಆರೋಗ್ಯಾಧಿಕಾರಿ ಉದಯ ಕುಡಚಿ, ಪಂರಾ ಎಇಇ ಎಂ.ಎಸ್. ಬಿರಾದಾರ ಪಾಟೀಲ, ಹಿರಿಯ ಸಹಾಯಕ ನಿರ್ದೇಶಕ ತಾತ್ಯಾಸಾಹೇಬ ನಾಂದನಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ