ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:- ಧೂಧಗಂಗಾ ಕೃಷ್ಣಾ ನದಿಗೆ ನೀರು ಬಿಡುವ ಕುರಿತು ಕೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲಾಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳಿಂದ ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳಲಾಗುತ್ತದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದ ಅವರು, ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಅತಿವೃಷ್ಟಿಯಿಂದಾಗಿ ನದಿಗೆ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿದು ಬರುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮೈದುಂಬಿ ಉಕ್ಕಿ ಹರಿಯುತ್ತಿರುವ ಪ್ರವಾಹದಿಂದಾಗಿ ಜನಸಾಮಾನ್ಯರಿಗೆ ಯಾವುದೇ ರೀತಿಯ ಅನಾಹುತವಾಗದಂತೆ ನೋಡಿಕೊಳ್ಳಲು ಹಾಗೂ ಪ್ರವಾಹ ಪರಿಸ್ಥಿತಿಯ ಎಲ್ಲ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಹಾಗೂ ನದಿ ತೀರದ ಜನರ ಸಂರಕ್ಷಣೆಯ ಕುರಿತು ವಿಶೇಷ ಮುತುವರ್ಜಿ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಪ್ರವಾಹ ಪರಿಸ್ಥಿತಿ ಕೈ ಮೀರಿದಾಗ ಜನ ಸಾಮಾನ್ಯರ ಸಂರಕ್ಷಣೆಗೆ ಯಾಂತ್ರಿಕೃತ ಬೋಟಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆಯ ಜೊತೆಗೆ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ದಿನೇ ದಿನೇ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ತೀವ್ರತೆ ಹೆಚ್ಚಾಗುತ್ತಿರುವುದರಿಂದ ನದಿ ತೀರದ ಜನರು ಆದಷ್ಟು ಬೇಗ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ರಾಮಗೊಂಡಾ ಪಾಟೀಲ, ಚಿಕ್ಕೋಡಿ ಸದಲಗಾ ಬಿಜೆಪಿ ಮಂಡಳ ಅಧ್ಯಕ್ಷ ಸಂಜಯ ಪಾಟೀಲ, ಬಿಜೆಪಿ ಪುರಸಭೆಯ ಸದಸ್ಯರಾದ ಆನಂದ ಪಾಟೀಲ, ಅಭಿನಂದನ ಪಾಟೀಲ, ಹೇಮಂತ ಶಿಂಗೆ, ಲಕ್ಮೀಕಾಂತ ಹಾಲಪ್ಪನ್ನವರ, ಭರತ ಬೋರಗಾಂವೆ, ಕೇತನ ಪಾಟೀಲ, ಅನಿರುದ್ದ ಪಾಟೀಲ, ರಾಜು ಅಮ್ರತಸಮ್ಮನ್ನವರ, ದಾದಾಸಾಬ ಬಾಧುಲೆ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ