Latest

ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ; ಅಧಿಕೃತ ಘೋಷಣೆ ಬಾಕಿ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದ 15ನೇ ರಾಷ್ಟ್ರಪತಿಯಾಗಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಶ್ಯಾಮಚರಣ ಮುರ್ಮು ಆಯ್ಕೆಯಾಗಿದ್ದು ಅಧಿಕೃತ ಘೋಷಣೆ ಬಾಕಿಯಿದೆ.

ಈ ಮೂಲಕ ಅವರು ಪ್ರತಿಭಾ ಪಾಟೀಲ್ ಅವರ ನಂತರ ದೇಶದ ಎರಡನೇ ಹಾಗೂ ಬುಡಕಟ್ಟು ಸಮುದಾಯದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೂತನ ರಾಷ್ಟ್ರಪತಿಯಾಗಿ ಅವರು ಜು.25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಗುರುವಾರ ಸಂಸತ್ ಭವನದಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ದ್ರೌಪದಿ ಮುರ್ಮು ಅವರು 3.78 ಲಕ್ಷ ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ, ಯುಪಿಎ ಅಭ್ಯರ್ಥಿ ಯಶವಂತ ಸಿನ್ಹಾ ಅವರ ವಿರುದ್ಧ   ವಿಜಯಿಯಾದರು. ಸಿನ್ಹಾ ಅವರಿಗೆ 145600 ಮತಗಳು ಮಾತ್ರ ಲಭಿಸಿವೆ. 

Home add -Advt

ರಾಷ್ಟ್ರಪತಿ ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ಯುಪಿಎ ಅಭ್ಯರ್ಥಿ ಯಶ್ವಂತ ಸಿನ್ಹಾ ಅವರ ವಿರುದ್ಧ ಅಡ್ಡ ಮತಗಳ ಚಲಾವಣೆಯೂ ನಡೆದಿದ್ದು ಓಡಿಶಾದ ಕಾಂಗ್ರೆಸ್ ಶಾಸಕರೊಬ್ಬರು ಸಹ ತಾವು ಮುರ್ಮು ಅವರ ಪರ ಮತ ಚಲಾಯಿಸಿದ್ದಾಗಿ ಮತದಾನ ನಡೆದ ಕೆಲವೇ ಸಮಯದಲ್ಲಿ ಬಹಿರಂಗವಾಗಿ  ಹೇಳಿಕೊಂಡಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ದ್ರೌಪದಿ ಮುರ್ಮು ಅವರ ಗೆಲುವು ಬಹುತೇಕ ಖಚಿತವಾಗಿತ್ತು.

ದ್ರೌಪದಿ ಮುರ್ಮು ಅವರು 1958ರ ಜೂ.28ರಂದು ಓಡಿಶಾದ ಬುಡಕಟ್ಟು ಜನಾಂಗದ ಬಡ ಕುಟುಂಬದಲ್ಲಿ ಜನಿಸಿದರು. ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ರಾಯರಂಗಾಪುರದ ಅರಬಿಂದೋ ಇಂಟೆಗ್ರಲ್ ಎಜ್ಯುಕೇಶನ್ ಎಂಡ್ ರಿಸರ್ಚ್ ಸೆಂಟರ್  ಇನ್ಸ್ಟಿಟ್ಯೂಟ್ ನ ಸಹಾಯಕ ಪ್ರಾಧ್ಯಾಪಕರಾಗಿ, ಒಡಿಶಾ ಸರಕಾರದ ನೀರಾವರಿ ಇಲಾಖೆಯಲ್ಲಿ  ಕಿರಿಯ ಸಹಾಯಕ ರಾಗಿ ಕೆಲಸ ಮಾಡಿದ್ದರು.  1997ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ರಾಯರಂಗಾಪುರ ನಗರ ಪಂಚಾಯಿತಿಯಿಂದ ತಮ್ಮ ರಾಜಕೀಯ ಜೀವನಕ್ಕೆ ಕಾಲಿಟ್ಟು 2000ನೇ ಇಸ್ವಿಯಲ್ಲಿ ರಾಯರಂಗಾಪುರ ವಿಧಾನಸಭೆ ಕ್ಷೇತ್ರದಿಂದ ಶಾಸಕಿಯಾಗಿ ಮೊದಲ ಬಾರಿ ಆಯ್ಕೆಯಾದರು. 

2002ರಲ್ಲಿ ನವೀನ್ ಪಾಟ್ನಾಯಿಕ ಸರಕಾರದಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಸಚಿವರಾದರು. 2015ರಲ್ಲಿ ಜಾರ್ಖಂಡ ರಾಜ್ಯಪಾಲರಾದರು. ಇದೀಗ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ್ದಾರೆ.

ಇಂದು ಸೋನಿಯಾ ವಿಚಾರಣೆ: ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ; ನಾಳೆ ಬೆಳಗಾವಿಯಲ್ಲಿ ಪ್ರತಿಭಟನೆ

Related Articles

Back to top button