ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿದ ಒತ್ತಡ: ಶಾಸಕ ಅನಿಲ ಬೆನಕೆ ವಿರುದ್ಧ ದಾಖಲಾಗುತ್ತಾ FIR?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ್ದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಘಟಾನುಘಟಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದ ಸರಕಾರ ಬೆಳಗಾವಿ ಶಾಸಕ ಅನಿಲ ಬೆನಕೆ ವಿರುದ್ಧ ಎಫ್ ಐಆರ್ ದಾಖಲಿಸುತ್ತಾ?
ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ತೀವ್ರ ಚರ್ಚೆ, ಒತ್ತಡ ಕೇಳಿಬರುತ್ತಿದೆ.
ಮಕರ ಸಂಕ್ರಾಂತಿ ಅಂಗವಾಗಿ ಶುಕ್ರವಾರ ಬೆಳಗಾವಿಯ ಚವಾಟ್ ಗಲ್ಲಿಯಲ್ಲಿ ಎಮ್ಮೆ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಸಾಮಾಜಿಕ ಅಂತರವಾಗಲಿ, ಮಾಸ್ಕ ಆಗಲಿ ಯಾವುದೂ ಇರಲಿಲ್ಲ. ಶಾಸಕ ಅನಿಲ ಬೆನಕೆ ಮುಖದಲ್ಲಿ ಮಾಸ್ಕ್ ಇದ್ದರೂ ಅದನ್ನು ಕೆಳಗೆ ಇಳಿಸಿಕೊಂಡಿದ್ದರು. ಮೂಗನ್ನಾಗಲಿ, ಬಾಯನ್ನಾಗಲಿ ಮುಚ್ಚಿಕೊಂಡಿರಲಿಲ್ಲ. ಅವರ ಸುತ್ತಲಿದ್ದ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವಂತೂ ಇರಲೇ ಇಲ್ಲ.
ಸ್ವತಃ ಅನಿಲ ಬೆನಕೆ ತಾವು ಎಮ್ಮೆ ಓಡಿಸುವ ಸ್ಪರ್ಧೆ ಉದ್ಘಾಟಿಸಿದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳೊಂದಿಗೆ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ನೆಟ್ಟಿಗರು ಎಲ್ಲಡೆ ಚರ್ಚೆ ನಡೆಸುತ್ತಿದ್ದಾರೆ. ಬೆನಕೆ ವಿರುದ್ಧ ಎಫ್ಐಆರ್ ದಾಖಲಿಸುವ ಧೈರ್ಯ ಪೊಲೀಸರಿಗಿಲ್ಲವೇ ಎಂದೂ ಪ್ರಶ್ನಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ಮಾಸ್ಕ್ ಧರಿಸಿಲ್ಲ, ಕೊರೋನಾ ರೂಲ್ಸ್ ಫಾಲೋ ಮಾಡಿಲ್ಲ ಎಂದು ನೂರಾರು ಜನಸಾಮಾನ್ಯರ ಮೇಲೆ ಕೇಸ್ ದಾಖಲಿಸಿರುವ ಪೊಲೀಸರು ಶಾಸಕರು ಹಾಗೂ ಅವರ ಜೊತೆಗಿದ್ದವರ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ಮೌನವಹಿಸಿರುವುದು ತೀವ್ರ ಟೀಕೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದ ಒತ್ತಡದಿಂದಲಾದರೂ ಪ್ರಕರಣ ದಾಖಲಿಸುತ್ತಾರಾ ಪೊಲೀಸರು? ಕಾದು ನೋಡಬೇಕಿದೆ.
ಬೆಳಗಾವಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣ; ಆರೋಗ್ಯ ಸಚಿವ ಡಾ.ಸುಧಾಕರ್ ಗೆ ಮಾಹಿತಿಯೇ ಇಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ