*ವಿಆರ್‌ಎಲ್ ಲಾಜಿಸ್ಟಿಕ್ಸ್, ವಿಜಯಾನಂದ ಟ್ರಾವೆಲ್ಸ್‌ಗೆ ಪ್ರತಿಷ್ಠಿತ ‘ರಸ್ತೆ ಸಾರಿಗೆ ಪ್ರಶಸ್ತಿ’*
* ಡಾ. ಆನಂದ ಸಂಕೇಶ್ವರ ‘ಬಿಸಿನೆಸ್ ಪರ್ಸನ್ ಆಫ್ ದ ಇಯರ್’
* ವಿಜಯಾನಂದ ಟ್ರಾವೆಲ್ಸ್ ‘ಎಮರ್ಜಿಂಗ್ ಬ್ರಾೃಂಡ್ ಆಫ್ ದ ಇಯರ್’
ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಪ್ರಸಕ್ತ ವರ್ಷದ ಪ್ರತಿಷ್ಠಿತ ‘ರಸ್ತೆ ಸಾರಿಗೆ ಪ್ರಶಸ್ತಿ’ಯ ಸರಕು ಸಾಗಣೆ ವಿಭಾಗದಲ್ಲಿ ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ‘ವರ್ಷದ ವ್ಯಕ್ತಿ’ (ಬಿಜಿನೆಸ್ ಪರ್ಸನ್ ಆಫ್ ದ ಇಯರ್) ಪುರಸ್ಕಾರ ಪಡೆದಿದ್ದಾರೆ. ಕಂಪನಿಯನ್ನು ಮುನ್ನಡೆಸುವಲ್ಲಿ ಅವರು ಮಾಡಿದ ಗಣನೀಯ ಪ್ರಯತ್ನಗಳನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಟಿವಿ9 ನೆಟ್‌ವರ್ಕ್ ಮತ್ತು ಲೀಡರ್ಸ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಅವಾರ್ಡ್ಸ್ ಸಂಸ್ಥೆಯು ಕಾಂಟಿನೆಂಟಲ್ ಟೈರ್ಸ್ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಹರ್ಷ ಮಲ್ಹೋತ್ರಾ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಆನಂದ ಸಂಕೇಶ್ವರ ಅವರು, ವಿಆರ್‌ಎಲ್ ಸಮೂಹದ ಪ್ರತಿಯೊಬ್ಬ ಉದ್ಯೋಗಿಯ ಪರಿಶ್ರಮ ಮತ್ತು 1976ರಲ್ಲಿ ಕೇವಲ ಒಂದು ಟ್ರಕ್‌ನೊಂದಿಗೆ ಕಂಪನಿಯನ್ನು ಆರಂಭಿಸಿ ಈ ಮಟ್ಟಕ್ಕೆ ಬೆಳೆಸಿದ ತಮ್ಮ ತಂದೆ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ದೂರದರ್ಶಿತ್ವವನ್ನು ಸ್ಮರಿಸಿದರು. ‘‘ಕಂಪನಿ ಇಂದು 6100ಕ್ಕೂ ಹೆಚ್ಚು ವಾಹನಗಳನ್ನು ಹೊಂದಿದ್ದು ವಾಣಿಜ್ಯ ವಾಹನಗಳ ಕ್ಷೇತ್ರದಲ್ಲಿ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ’’ ಎಂದು ಡಾ. ಆನಂದ ಸಂಕೇಶ್ವರ ವಿವರಿಸಿದಾಗ, ಸಭಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು.
ವಿಟಿಪಿಎಲ್‌ಗೂ ಪುರಸ್ಕಾರ:
ಇದೇ ವೇಳೆ, ಶಿವಾ ಸಂಕೇಶ್ವರ ನೇತೃತ್ವದ ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ (ವಿಟಿಪಿಎಲ್), ಬಸ್ ಆಪರೇಟರ್ಸ್ ವಿಭಾಗದಲ್ಲಿ ‘ಎಮರ್ಜಿಂಗ್ ಬ್ರಾೃಂಡ್ ಆಫ್ ದ ಇಯರ್’ ಎಂಬ ಪ್ರಶಸ್ತಿಗೆ ಪಾತ್ರವಾಯಿತು. ಬಸ್ ಕಾರ್ಯಾಚರಣೆ ಬಿಜಿನೆಸ್ಸನ್ನು ವಿಆರ್‌ಎಲ್ ಲಾಜಿಸ್ಟಿಕ್ಸ್‌ನಿಂದ 2023ರಲ್ಲಿ ಪ್ರತ್ಯೇಕಿಸಲಾಗಿದ್ದು, ಅದು ಈಗ ಸ್ವತಂತ್ರ ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹೆಚ್ಚು ಬಸ್‌ಗಳನ್ನು ಕ್ಷಿಪ್ರ ಅವಧಿಯಲ್ಲಿ ಸೇರ್ಪಡೆ ಮಾಡಿರುವುದು, ಹೊಸಹೊಸ ಮಾರ್ಗಗಳನ್ನು ಪ್ರಾರಂಭಿಸಿರುವುದು, ನವನವೀನ ಅಭ್ಯಾಸಗಳನ್ನು ಅಳವಡಿಸಿರುವುದು ಮುಂತಾದ ಕಾರಣಗಳಿಂದ ಮುಂದಿನ ದಿನಗಳಲ್ಲಿ ಭಾರಿ ಯಶಸ್ಸು ಸಾಧಿಸಲಿರುವ ಹಿನ್ನೆಲೆಯಲ್ಲಿ ವಿಟಿಪಿಎಲ್‌ನ್ನು ‘ವರ್ಷದ ಎಮರ್ಜಿಂಗ್ ಬ್ರಾೃಂಡ್’ ಆಗಿ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ, ವಿ-ಟ್ರಾನ್ಸ್, ಗ್ಯಾನ್ ಲಾಜಿಸ್ಟಿಕ್ಸ್ ಪ್ರೈ.ಲಿ., ಜೆಕೆಎಂ ಟ್ರಾನ್ಸ್‌ಪೋರ್ಟ್, ಎಚ್‌ಬಿಆರ್ ಟ್ರಾನ್ಸ್‌ಪೋರ್ಟ್, ಪಂಕಜ್ ಟ್ರಾನ್ಸ್‌ಪೋರ್ಟ್ ಮುಂತಾದ ಕಂಪನಿಗಳಿಗೂ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 50-200 ವಾಣಿಜ್ಯ ವಾಹನಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಕೆಲವು ಮಹಿಳಾ ಉದ್ಯಮಿಗಳನ್ನೂ ಗುರುತಿಸಿ ಪುರಸ್ಕರಿಸಲಾಯಿತು.
ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮಾಡಿರುವ ಸಾಧನೆಯನ್ನು ಗುರುತಿಸಿ ಪುರಸ್ಕರಿಸುವುದು ಈ ಪ್ರಶಸ್ತಿಯ ಹಿಂದಿನ ಉದ್ದೇಶವಾಗಿದೆ. ಯಾವುದೇ ವಾಣಿಜ್ಯ ಉದ್ದೇಶಗಳಿಲ್ಲದೆ, ಸಂಪೂರ್ಣವಾಗಿ ಸಾಧನೆಯನ್ನೇ ಆಧರಿಸಿ ಆಯ್ಕೆ ಮಾಡಿದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ವಿಆರ್‌ಎಲ್‌ನ ಎರಡು ಸಂಸ್ಥೆಗಳು ಈ ಮೂಲಕ ರಾಷ್ಟ್ರಮಟ್ಟದ ಗೌರವಕ್ಕೆ ಭಾಜನವಾಗಿವೆ.
https://pragativahini.com/wp-admin/post.php?post=185703&action=edit
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ