ಬೆಲೆ ಏರಿಕೆ ನೆಪ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಕಾಲದಲ್ಲಿ ಬೆಲೆಗಳು ದುಪ್ಪಟ್ಟಾಗಿವೆ – ಲಕ್ಷ್ಮೀ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಕಟಕೋಳ (ರಾಮದುರ್ಗ): 2014ರಲ್ಲಿ ಭಾರೀ ಬೆಲೆ ಏರಿಕೆಯಾಗಿದೆ ಎಂದು ಹೇಳಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೇರಿತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬೆಲೆಗಳು ಎರಡುಪಟ್ಟಿಗಿಂತ ಹೆಚ್ಚಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ರಾಮದುರ್ಗ ತಾಲೂಕಿನ ಕಟಕೋಳದಲ್ಲಿ ಗುರುವಾರ ಸಂಜೆ ಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಪ್ರಚಾರ ಮಾಡುತ್ತಿದ್ದರು. ಆಗ ಪೆಟ್ರೋಲ್ ಬೆಲೆ 50 ರೂ. ಇತ್ತು, ಇಂದು 100 ರೂ ಗಡಿ ದಾಟಿದೆ. ಆಗ ಸಿಲೆಂಡರ್ ಬೆಲೆ 450 ರೂ. ಇತ್ತು, ಇಂದು 1100 ರೂ ದಾಟಿದೆ. ಬಹುತೇಕ ಎಲ್ಲ ಕಿರಾಣಿ ಸಾಮಗ್ರಿ ಬೆಲೆ ಈಗ ವಿಪರೀತ ಏರಿದೆ. ಬಿಜೆಪಿ ಕಾಲದಲ್ಲಿ ಬೆಲೆಗಳು ಇಳಿಯುವ ಬದಲು ದುಪ್ಪಟ್ಟಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಲೆ ಏರಿಕೆಯಿಂದ ತತ್ತರಿಸಿರುವವರಿಗೆ ಏನಾದರೂ ಸಹಾಯ ಮಾಡಬೇಕೆಂದು ಕಾಂಗ್ರೆಸ್ ಸರಕಾರ 5 ಗ್ಯಾರಂಟಿಗಳನ್ನು ನೀಡಿದೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ಮುಟ್ಟುವ ವ್ಯವಸ್ಥೆ ಮಾಡಿದೆವು. ಮನೆ ಮನಗಳನ್ನು ಬೆಳಗಲು ಐದು ಯೋಜನೆಗಳನ್ನು ಜಾರಿಗೆ ತಂದೆವು. ಐದು ಗ್ಯಾರಂಟಿಗಳು ಇಂದು ಜನಪ್ರಿಯವಾಗಿವೆ. ಇಂದು ಗೃಹ ಲಕ್ಷ್ಮಿಯ 9ನೇ ಕಂತು ಜಮಾ ಮಾಡಲಾಗಿದೆ. ಪ್ರತಿಯೊಬ್ಬರ ಖಾತೆಗೆ ತಲಾ 18 ಸಾವಿರ ರೂ. ನೀಡಲಾಗಿದೆ. ಇದರಿಂದಾಗಿ ಬಡ ಕುಟುಂಬಗಳು ಸ್ವಲ್ಪವಾದರೂ ನೆಮ್ಮದಿ ಕಾಣಲು ಸಾಧ್ಯವಾಗಿದೆ. ಈಗ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿ ಮತ್ತೆ ನಿಮ್ಮ ಮುಂದೆ ನಿಂತಿದ್ದೇವೆ. ಕೊಟ್ಟ ಮಾತನ್ನು ಈಡೇರಿಸಿ ಮತ ಕೇಳಲು ಬಂದಿದ್ದೇವೆ ಎಂದು ಅವರು ಹೇಳಿದರು.

ಬಿಜೆಪಿಯವರು ನಾವು ತಂದಿರುವ ಗ್ಯಾರಂಟಿಗಳನ್ನು ಪ್ರಶ್ನಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಲು ಹೇಳುತ್ತಿದ್ದಾರೆ. ಬಡವರಿಗೆ ಯೋಜನೆಗಳನ್ನು ಕೊಡುವುದು ಅವರಿಗೆ ಬೇಕಾಗಿಲ್ಲ. ಸ್ವತಂತ್ರ ಸಿಕ್ಕಿದ ನಂತರ 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ಮಾಡಿದೆ. ಭಾರತ ಅತ್ಯಂತ ಸಂಕಷ್ಟದಲ್ಲಿದ್ದಾಗ, ಮಹಾಮಾರಿಗಳು ಬಂದಾಗ, ಮೂಲಭೂತ ಸೌಲಭ್ಯಗಳಿಲ್ಲದಾಗ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡು ಇಂದು ಭಾರತವನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ನೆಹರು ಅವರು ತಂದ ಪಂಚವಾರ್ಷಿಕ ಯೋಜನೆ, ಹಸಿರು ಕ್ರಾಂತಿ, ಬ್ಯಾಂಕ್ ಗಳ ರಾಷ್ಟ್ರೀಕರಣ ಮೊದಲಾದವುಗಳ ಮೂಲಕ ಭಾರತವನ್ನು ಅಭಿವೃದ್ಧಿಯತ್ತ ತಂದು ನಿಲ್ಲಿಸಿದೆ ಎಂದು ಅವರು ಹೇಳಿದರು.
ಬಿಜೆಪಿ ನೀಡಿದ್ದ ಯಾವ ಭರವಸೆ ಈಡೇರಿದೆ ಹೇಳಿ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರಲ್ಲಾ, ಎಲ್ಲಿದೆ ಉದ್ಯೋಗ? ಕಪ್ಪು ಹಣ ತಂದು ನಿಮ್ಮ ಅಕೌಂಟ್ ಗೆ ಹಾಕುತ್ತೇವೆ ಎಂದು ಹೇಳಿದ್ದವರು ಇಂದು ಬ್ಯಾಂಕ್ ಗಳನ್ನು ಖಾಸಗಿಯವರ ಕೈಗೆ ಕೊಡುತ್ತಿದ್ದಾರೆ. ಶ್ರೀಮಂತರ ಕೈಗೆ ಕೊಡುತ್ತಿದ್ದಾರೆ. ಬಡವರಿಗೆ ತೊಂದರೆ ಕೊಡುತ್ತಿದ್ದಾರೆ. ರಾಷ್ಟ್ರೀಯ ಸಂಸ್ಥೆಗಳನ್ನು ಅಂಬಾನಿ, ಅದಾನಿಯವರ ಕೈಗೆ ಒಪ್ಪಿಸುತ್ತಿದ್ದಾರೆ. ನಿಜಾಂಶವನ್ನು ಅರ್ಥ ಮಾಡಿಕೊಳ್ಳಿ. ಕೇವಲ ಬಿಜೆಪಿಯವರ ಸುಳ್ಳನ್ನು ನಂಬಿ ಮೋಸ ಹೋಗಬೇಡಿ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಗೆ ಮತ ನೀಡಿ ಅಭಿವೃದ್ಧಿಗೆ ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.
ಪ್ರದೀಪ ಪಟ್ಟಣ, ಸೋಮಶೇಖ ಸಿದ್ದಲಿಂಗಪ್ಪನವರ್, ರಾಯಪ್ಪ ಕತ್ತಿ, ಜಿ.ಬಿ.ರಂಗಣ್ಣಗೌಡರ್, ಪರ್ವತಗೌಡ ಪಾಟೀಲ, ಜಾವುರ್ ಹಾಜಿ, ಆರ್.ಕೆ.ಪಾಟೀಲ, ಮಾರುತಿ ಶಿರೆಗಾರ ಮೊದಲಾದವರು ಇದ್ದರು.
ಇದಕ್ಕೂ ಮೊದಲು ಬಸ್ ನಿಲ್ದಾಣದಿಂದ ಬಜಾರ್ ಪೇಟೆ ವರೆಗೆ ಬೃಹತ್ ಮೆರವಣಿಗೆ ನಡೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ