ಸ್ವತಃ ಫೀಲ್ಡಿಗಿಳಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ಪ್ರಗತಿವಾಹಿನಿ ಸುದ್ದಿ – ಬೆಂಗಳೂರು : ರಾಜ್ಯದಲ್ಲಿ ಯಾವ ಕ್ಷಣದಲ್ಲಾದರೂ ಚುನಾವಣೆ ಎದುರಾಗಬಹುದು, ಮುಂಬರುವ ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರು ಸಿದ್ಧರಾಗಿರಬೇಕು, ಪಕ್ಷಕ್ಕಾಗಿ ಶ್ರಮಿಸುವ ಪಕ್ಷದ ಕಾರ್ಯಕರ್ತರಿಗೆ ಸಮರ್ಪಕ ಸ್ಥಾನ ಮತ್ತು ಮಾನ್ಯತೆ ನೀಡಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಪಕ್ಷದ ಶಿಸ್ತಿನ ಕಾರ್ಯಕರ್ತರ ಸಭೆ ನಡೆಯಿತು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪತನದ ನಂತರ, ಪಕ್ಷವು ತನ್ನ ಮೊದಲ ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸಿತು. ಇತ್ತೀಚೆಗೆ ಮೂವರು ಶಾಸಕರ ರಾಜೀನಾಮೆ ಮತ್ತು ಅದರ ಪರಿಣಾಮಗಳ ಹಿನ್ನೆಲೆಯಲ್ಲಿ ದೇವೇಗೌಡ ಸ್ವತಃ ಪಕ್ಷದ ಬಲವರ್ಧನೆಗೆ ರಂಗಕ್ಕೆ ಇಳಿದಿದ್ದಾರೆ. ಇದೆ ಕಾರಣಕ್ಕಾಗಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯದ ವಿಧಾನಸಭೆಗೆ ಚುನಾವಣೆಗಳು ಯಾವುದೇ ಸಮಯದಲ್ಲಿ ಬರಬಹುದು. ಪಕ್ಷಕ್ಕಾಗಿ ನಮ್ಮೊಂದಿಗೆ ಸೇರಿ ಎಂದಿದ್ದಾರೆ.
ಹಾಗೂ, ಕೆಲವು ಶಿಸ್ತಿನ ಮತ್ತು ಪ್ರಾಮಾಣಿಕ ಕಾರ್ಯಕರ್ತರಿಗೆ ಇತ್ತೀಚಿನ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಸ್ಥಾನಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. ತಿಂಗಳ ಕೊನೆಯಲ್ಲಿ ಮಹಿಳಾ ಸಭೆ ನಡೆಯಲಿದ್ದು, ಮಹಿಳಾ ಮೀಸಲಾತಿಗಾಗಿ ಒತ್ತಾಯಿಸಲಾಗುತ್ತದೆ ಎಂದಿದ್ದಾರೆ. ಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮಾವೇಶಗಳನ್ನು ಆಯೋಜಿಸಲಾಗುವುದು, ಎಂದರು. ರಾಜ್ಯದೆಲ್ಲೆಡೆ ಸಭೆಗಳನ್ನು ಮುಂದುವರಿಸಲಾಗುವುದು ಹಾಗೂ ಪಕ್ಷಕ್ಕೆ ದ್ರೋಹ ಮಾಡಿದ ಗೋಪಾಲಯ್ಯ ಮತ್ತು ವಿಶ್ವನಾಥ್ ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಪ್ರತಿನಿಧಿಸುವ ಅವಕಾಶವನ್ನು ನೀಡುವುದಾಗಿ, ಯಾವುದೇ ಕಾರಣಕ್ಕೂ ದ್ರೋಹ ಬಗೆದವರಿಗೆ ಟಿಕೆಟ್ ಇಲ್ಲ ಎಂದು ಭರವಸೆ ನೀಡಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ