ಮೋದಿ ಎದುರೇ ಧ್ವನಿ ಎತ್ತುವ ಧೈರ್ಯ ತೋರಿದ ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ, ತುಮಕೂರು:ಆಹಾರ ಉತ್ಪಾದನೆಯಲ್ಲಿ ಭಾರತ ಗರಿಷ್ಠ ಸಾಧನೆ ಮಾಡಿದೆ.  ದೇಶದ ಕೃಷಿ ಕ್ಷೇತ್ರ ಅಭಿವೃದ್ಧಿಯತ್ತ ಸಾಗಿರುವುದು ಸಂತಸದ ವಿಷಯ.  ದಶಕಗಳಿಂದ ಜಾರಿಯಾಗದೇ ಇದ್ದ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ನಮ್ಮದು ರೈತಪರವಾದ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ರೈತ ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ಕೃಷಿ ಸಮ್ಮಾ ನ್ ನಿಧಿ ಯೋಜನೆಯಡಿ  ರೈತರಿಗೆ 2 ನೇ ಕಂತಿನ ಅನುದಾನ ಬಿಡುಗಡೆ ಮಾಡಿದರು. ಇದೇ ವೇಳೆ ಕೃಷಿ ಕರ್ಮಣ ಪ್ರಶಸ್ತಿಗಳನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಪ್ರಧಾನಿ,  ದೇಶದಲ್ಲಿರುವ ರೈತರ ಬಡತನ ದೂರವಾಗಿದೆ. ನೀರಾವರಿ ಯೋಜನೆಗಳು, ಬೇವು ಲೇಪಿತ ಯೂರಿಯಾ, ವಿಮಾ ಯೋಜನೆಗಳು, ರೈತರ ಉತ್ಪನ್ನಗಳ ಮಾರಾಟ, ರೈತರ ಜಾನುವಾರಗಳಿಗೆ ಕಡಿಮೆ ದರದಲ್ಲಿ ಲಸಿಕೆ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ರೈತರಿಗೆ ಸಿಗಬೇಕಾದ ನೆರವು ಸಂಪೂರ್ಣ ಸಿಗುತ್ತಿದೆ. ಮಧ್ಯವರ್ತಿಗಳ ಪಾಲಾಗುವುದನ್ನ ತಪ್ಪಿಸಿದ್ದೇವೆ. ಕೇಂದ್ರದ ಯೋಜನೆಗಳು ಇಂದು ಸಮಪರ್ಕವಾಗಿ ರೈತರನ್ನು ತಲುಪುತ್ತಿವೆ ಎಂದರು.

ಇಂದು ಕರ್ನಾಟಕ ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. 6 ಕೋಟಿ ರೈತರ ಖಾತೆಗೆ ಹಣ ಜಮೆಮಾಡುವ ಘಟನೆಗೆ ಸಾಕ್ಷಿಯಾಗಿದೆ.  6 ಕೋಟಿ ರೈತರ ಖಾತೆಗೆ 12 ಕೋಟಿ ರೂ. ಹಣ ಜಮೆಯಾಗಿದೆ. ಹಿಂದೆ 1 ರೂ ಸರ್ಕಾರ ಬಿಡುಗಡೆ ಮಾಡಿದರೆ 15 ಪೈಸೆ ಮಾತ್ರ ರೈತರಿಗೆ ಸಿಗುತಿತ್ತು. ಈಗ ಒಂದು ರೂಪಾಯಿ ಸಂಪೂರ್ಣವಾಗಿ ರೈತನಿಗೆ ಸೇರುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯನ್ನು ಯಾರು ಅಳವಡಿಸಿಕೊಂಡಿಲ್ಲವೋ ಆ ರಾಜ್ಯಗಳು ಈ ಯೋಜನೆಯನ್ನು ಅಳವಡಿಸಿಕೊಳ್ಳಲಿ. ರೈತರ ವಿಚಾರದಲ್ಲಿ  ಯಾವುದೇ ರಾಜಕೀಯ ಬೇಡ. ಯಾವುದೇ ಒಂದು ಪಕ್ಷದ ಯೋಜನೆ ಎಂಬ ಬೇಧ-ಭಾವ ಮಾಡಬೇಡಿ ಎಂದು ರಾಜ್ಯ ಸರ್ಕಾರಗಳಿಗೆ ಟಾಂಗ್ ನೀಡಿದರು.

ದಾನ್ಯ ರಕ್ಷಣೆಗೆ ಕೋಲ್ಡ್ ಸ್ಟೋರೇಜ್ ಜಾರಿಗೆ ತರುತ್ತೇವೆ. ಶೀತಲೀಕರಣ ಘಟಕಗಳ ಸಾಮರ್ಥ್ಯ ವೃದ್ಧಿಸುತ್ತೇವೆ. ಜಾನುವಾರುಗಳ ಆರೋಗ್ಯ ರಕ್ಷಣೆಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ದೇಶದ ಆರ್ಥಿಕತೆ 5 ಟ್ರಿಲಿಯನ್ ಮುಟ್ಟಲಿದೆ. ಇದಕ್ಕೆ ಅಗತ್ಯವಾದ ಸೌಕರ್ಯ ನಾವು ನಿರ್ಮಾಣ ಮಾಡುತ್ತಿದ್ದೇವೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯದಲ್ಲಿ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಮೋದಿ ಎದುರೇ ಧ್ವನಿ ಎತ್ತುವ ಧೈರ್ಯ ತೋರಿದ ಯಡಿಯೂರಪ್ಪ

ಕರ್ನಾಟಕದಲ್ಲಿ ಪ್ರವಾಹ ಬಂದು ಸಾವಿರಾರು ಕೋಟಿ ರೂ. ಹಾನಿಯಾದರೂ ಕೇಂದ್ರ ಸರಕಾರ ಸ್ಪಂದಿಸಿಲ್ಲ ಎನ್ನುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಎದುರೇ ಹೇಳುವ ಸಾಹಸ ಮಾಡಿದ್ದಾರೆ.
ತುಮಕೂರಿನ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಯಡಿಯೂರಪ್ಪ, 2-3 ಬಾರಿ ಕೋರಿದರೂ ಕೇಂದ್ರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಇನ್ನಾದರೂ ನೆರವಾಗಬೇಕೆಂದು ವಿನಂತಿಸುತ್ತೇನೆ ಎಂದು ನೇರವಾಗಿ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button