ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಕ್ಕಳ ಮುಂದೆ ಮಾಡಿದ್ದ ರಾಜಕೀಯ ಭಾಷಣಕ್ಕೆ ಕಿಡಿಕಾರಿರುವ ಕಾಂಗ್ರೆಸ್ ನಾಯಕರು ಮೋದಿ ವಿರುದ್ಧ ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಗುಡುಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ತುಮಕೂರಿನ ಸಿದ್ದಗಂಗಾ ಮಠಕ್ಕೆ ಅದರದ್ದೇ ಆದ ಒಂದು ಸ್ಥಾನವಿದೆ. ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನವಿದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ.
ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ನಿಮ್ಮ ಕೊಳಕು ರಾಜಕೀಯದ ಭಾಷಣ ಮಾಡಿದ ನರೇಂದ್ರ ಮೋದಿ ಅವರೇ, ನಿಮ್ಮನ್ನು ಆ ಪವಿತ್ರ ನೆಲ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಧಾರ್ಮಿಕ ನೆಲೆಗಟ್ಟಿನಲ್ಲಿ ದೇಶ ವಿಭಜನೆ , ವೋಟ್ ಬ್ಯಾಂಕ್ ಹಾಗೂ ತುಷ್ಟೀಕರಣದ ರಾಜಕಾರಣ ಇವೆಲ್ಲ ಕಾಂಗ್ರೆಸ್ ನ ಕಾರ್ಯ ಸೂಚಿಗಳು. ಇತ್ತೀಚೆಗೆ ಟಿಪ್ಪು ಜಯಂತಿಯಂತಹ ವೋಟ್ ಬ್ಯಾಂಕ್ ಹಾಗೂ ತುಷ್ಟಿಕರಣವನ್ನು ಅರ್ಥಮಾಡಿಕೊಳ್ಳಲಾರದಷ್ಟು ಜನ ಎಳೆಯ ಮಕ್ಕಳೆಂದು ಭಾವಿಸದಿರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ