ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗಾಂಜಾ ಕೊಡುವಂತೆ ಆಗ್ರಹಿಸಿ ಕೈದಿಯೊಬ್ಬ ಜೈಲರ್ ಮೇಲೇ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಾಲ್ಕು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಚಳಿಗಾಲದ ಅಧಿವೇಶನದ ಅವಧಿಯಲ್ಲಿ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ವಿಚಾರಾಣಾಧೀನ ಕೈದಿ ಶಾಹಿದ್ ಖುರೇಷಿ ಹಲ್ಲೆ ನಡೆಸಿರುವ ವ್ಯಕ್ತಿಯಾಗಿದ್ದು, ಸಹಾಯಕ ಜೈಲರ್ ಜಿ.ಆರ್.ಕಾಂಬಳೆ ಅವರು ತೀವ್ರವಾಗಿ ಗಾಯಗೊಂಡಿದ್ದಾರೆನ್ನಲಾಗಿದೆ. ಕಾಂಬಳೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರಿಂದ ಹಲ್ಲೆ ಕೃತ್ಯ ಬೆಳಕಿಗೆ ಬಂದಿದೆ.
ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಕೈದಿಯ ವಿರುದ್ಧ ಎನ್‌ಡಿಪಿಎಸ್ ಸೇರಿದಂತೆ ವಿವಿಧ ಕಾಯಿದೆಗಳಡಿ ಪ್ರಕರಣ ದಾಖಲಾಗಿದೆ. ಇತ್ತೀಚಿಗಷ್ಟೇ ಬೆಳಗಾವಿ ಜೈಲಿನಲ್ಲಿ ಕೈದಿಗಳು ಇಸ್ಪೀಟ್ ಆಡುತ್ತಾ ಐಷಾರಾಮಿಯಾಗಿ ಕಳೆಯುತ್ತಿರುವ ದೃಶ್ಯವೊಂದು ಹೊರಬಿದ್ದಿತ್ತು. ಈ ಬೆನ್ನಲ್ಲೆ ನಡೆದಿರುವ ಹಲ್ಲೆ ಪ್ರಕರಣ ಜೈಲು ಇಲಾಖೆಯ ಕಾರ್ಯ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ