ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ʻಚಾವುಂಡರಾಯ ಪ್ರಶಸ್ತಿʼ ಪ್ರಕಟಗೊಂಡಿದೆ.
ಶ್ರವಣಬೆಳಗೊಳದ ಶ್ರೀ ಎಸ್.ಡಿ.ಜಿ.ಎಂ.ಎ ಮ್ಯಾನೇಜ್ಮೆಂಟ್ ಕಮಿಟಿಯ ವತಿಯಿಂದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಮಹಾಸ್ವಾಮಿಗಳು ನೀಡಿರುವ ದತ್ತಿಯ 2022ನೇ ಸಾಲಿನ ಚಾವುಂಡಾಯ ಪ್ರಶಸ್ತಿಗೆ ಹಿರಿಯ ಲೇಖಕ ವಿದ್ವಾಂಸ ಪ್ರೊ. ಕೆ.ಇ.ರಾಧಾಕೃಷ್ಣ ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ.
ಚಾವುಂಡರಾಯ ಪ್ರಶಸ್ತಿಯ 30,000(ಮುವತ್ತು ಸಾವಿರ) ರೂ. ನಗದು, ಪ್ರಶಸ್ತಿ ಫಲಕ, ಪುಸ್ತಕ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಶ್ರವಣಬೆಳಗೊಳದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಮಹಾಸ್ವಾಮಿಗಳು ಶ್ರೀ ಎಸ್.ಡಿ.ಜಿ.ಎಂ.ಎ ಮ್ಯಾನೆಜ್ಮೆಂಟ್ ಕಮಿಟಿಯ ಪರವಾಗಿ ಈ ವಿಶೇಷ ದತ್ತಿ ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುತ್ತಾರೆ. ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡ ಭಾಷೆಯಲ್ಲಿ ರಚಿಸಿ ಪ್ರಕಟಗೊಂಡಿರುವ ಪ್ರಬಂಧ, ವಿಮರ್ಶೆ, ಕಾದಂಬರಿ, ನಾಟಕ, ಕಥಾ ಸಾಹಿತ್ಯ ಪ್ರಕಾರಗಳ ಲೇಖಕರು, ಅನುವಾದಕರು ಮತ್ತು ಗ್ರಂಥ ಸಂಪಾದಕರುಗಳಿಗೆ ಈ ಪ್ರಶಸ್ತಿ ಪ್ರಧಾನ ಮಾಡಬೇಕು ಎನ್ನುವ ಆಶಯವನ್ನು ದತ್ತಿ ನಿಧಿ ಹೊಂದಿರುತ್ತದೆ. 1995 ರಿಂದ
ಇಲ್ಲಿಯವರೆಗೆ 27 ಜನರಿಗೆ ಈ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಧಾನ ಮಾಡಲಾಗಿದೆ. ಭಗವಾನ ಶ್ರೀ ಜಿನಸೇನಾಚಾರ್ಯ ಮತ್ತು ಶ್ರೀ ಗುಣಭದ್ರಾಚಾರ್ಯರಿಂದ ವಿರಚಿತಗೊಂಡ ಸಂಸ್ಕೃತದ ಜೈನ ಮಹಾಪುರಾಣವನ್ನು ಕನ್ನಡಕ್ಕೆ ಎರ್ತೂರು ಶ್ರೀ ಶಾಂತಿರಾಜ ಶಾಸ್ತ್ರಿಗಳು ಅನುವಾದಿಸಿದ್ದರು. ಅದನ್ನು ಹಿರಿಯ ಲೇಖಕ ಹಾಗೂ ವಿದ್ವಾಂಸ ಪ್ರೊ. ಕೆ. ಇ. ರಾಧಾಕೃಷ್ಣ ಅವರು ಈ ಬೃಹತ್ ಗ್ರಂಥವನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿರುವುದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಚಾವುಂಡರಾಯ ದತ್ತಿ ಪ್ರಶಸ್ತಿಯು ಜೈನ್ಯ ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿದ್ದು, ನಾಡಿನ ಜೈನ ಸಾಹಿತ್ಯ ಕ್ಷೇತ್ರದಲ್ಲಿ ಸದ್ದಿಲ್ಲದೆ ಕಲಸ ಮಾಡುತ್ತಿರುವ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಬೇಕು ಎನ್ನುವ ದಾನಿಗಳ ಆಶಯ. ಅದಕ್ಕೆ ಯಾವುದೇ ಚ್ಯುತಿಯಾಗದ ರೀತಿಯಲ್ಲಿ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ