*ಚನ್ನಮ್ಮ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಮುಖ್ಯಮಂತ್ರಿ ಸಿದ್ದರಾಮಯ್ಯ*

201 ನೇ ಕಿತ್ತೂರು ಉತ್ಸವಕ್ಕೆ ವರ್ಣರಂಜಿತ ತೆರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ತೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮನ ಹೆಸರು ಇಡಲು ಕೇಂದ್ರಕ್ಕೆ ಪತ್ರ ಬರೆದು ಒಂದು ವರ್ಷವಾದರೂ ಕೇಂದ್ರ ಸರಕಾರ ಇದುವರೆಗೆ ಯಾವುದೇ ಕ್ರಮವಹಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಶನಿವಾರ(ಅ25) ನಡೆದ ಮೂರು ದಿನಗಳ ಕಾಲ ನಡೆದ 201 ನೇ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮ 1824 ರ ಅಕ್ಟೋಬರ್ 23 ರಂದು ಬ್ರಿಟೀಷರ ವಿರುದ್ಧ ಹೋರಾಡಿ ಜಯಗಳಿಸಿದ್ದರು. ಈ ವಿಜಯದ ಸವಿನೆನಪಿಗಾಗಿ ಪ್ರತಿವರ್ಷ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ.
ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ ಮುಂಚೆಯೇ ಬ್ರಿಟೀಷರ ವಿರುದ್ಧ ಹೋರಾಡಿದ್ದಾರೆ. ಶರಣಾಗತಿಯ ಬದಲು ಹೋರಾಟಕ್ಕೆ ಧುಮುಕಿದ ಚನ್ನಮ್ಮ, ರಾಯಣ್ಣ ಮತ್ತು ಅಮಟೂರ ಬಾಳಪ್ಪನವರು ಸ್ವಾಭಿಮಾನದ ಸಂಕೇತವಾಗಿದ್ದಾರೆ.
ಥ್ಯಾಕರೆಯನ್ನು ಕೊಂದು ಬ್ರಿಟೀಷರ ವಿರುದ್ಧ ಜಯಗಳಿಸಿದ್ದು ಚನ್ನಮ್ಮನ ಸಾಧನೆಯ ಕಿರೀಟವಾಗಿದೆ.
ನಮ್ಮಲ್ಲಿಯೇ ಒಡೆದಾಳುವ ನೀತಿ; ಸಂಗೊಳ್ಳಿ ರಾಯಣ್ಣನನ್ನು ಹಿಡಿಯಲು ನಮ್ಮವರೇ ನೀಡಿದ ಮಾಹಿತಿಯು ಬ್ರಿಟೀಷರಿಗೆ ಅನುಕೂಲವಾಗಿತ್ತು.
ಚನ್ನಮ್ಮನ ಹೋರಾಟದ ಬಗ್ಗೆ ನಾಡಿಗೆ ತಿಳಿಸುವುದಕ್ಕಾಗಿ 2017 ರಲ್ಲಿ ನಮ್ಮ ಸರಕಾರವೇ ಕಿತ್ತೂರು ಚೆನ್ನಮ್ಮ ಜಯಂತಿ ಆರಂಭಿಸಿತು ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ.
ಚನ್ನಮ್ಮನ ಸಾಹಸಗಾಥೆ ತಿಳಿಸಲು ಜಯಂತಿ ಆರಮಭಿಸಲಾಯಿತೇ ಹೊರತು ರಾಜಕೀಯ ಕಾರಣಕ್ಕಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಚನ್ನಮ್ಮನ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವಂತಹ ಹೆಸರು. ಟಿಪ್ಪು ಸುಲ್ತಾನ್ ಕೂಡ ವೀರಾವೇಷದಿಂದ ಬ್ರಿಟೀಷರ ವಿರುದ್ಧ ಹೋರಾಡಿದ್ದರು.ಇದನ್ನು ಹೇಳಿದರೆ ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ.
ಟಿಪ್ಪು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತ ಯುದ್ಧಭೂಮಿಯಲ್ಲಿಯೇ ಕೊನೆಯುಸಿರು ಎಳೆದಿದ್ದಾರೆ.
ಜಾತಿ, ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ ಮಾಡಲಾಗುತ್ತದೆ. ಯಾವುದೇ ಧರ್ಮದಲ್ಲಿಯೂ ದ್ವೇಷವನ್ನು ಬೋಧಿಸಿಲ್ಲ. ಆದ್ದರಿಂದ ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕು.
ಸಮಾಜ ಒಡೆಯುವಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇತಿಹಾಸದ ಕುರಿತು ತಿಳಿಸಲು ಉತ್ಸವಗಳನ್ನು ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ಹುನಗುಂದ ಶಾಸಕರೂ ಆಗಿರುವ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ ಮಾತನಾಡಿ, ವೀರಮಾತೆ ಜಯಂತ್ಯೋತ್ಸವ ಆಚರಣೆಯ 25 ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಡೇರಿಸಿದರು.
ಇದಲ್ಲದೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಅವರೇ.
ಚನ್ನಮ್ಮನ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ರಾಜ್ಯ ಸರಕಾರದ ವತಿಯಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳಿಸಿರುವುದು ಕೂಡ ಸಿದ್ದರಾಮಯ್ಯನವರು. ಆದ್ದರಿಂದ ಸಮಾಜದ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಾಶಪ್ಪನವರ ಹೇಳಿದರು.
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಿಗಿಂತ ಮುಂಚಿತವಾಗಿಯೇ ಬ್ರಿಟೀಷರ ವಿರುದ್ಧ ಪ್ರಪ್ರಥಮವಾಗಿ ಹೋರಾಟ ಮಾಡಿದ ಚನ್ನಮ್ಮನ ಕುರಿತು ಅಧಿಕೃತವಾಗಿ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಬಾಬಾಸಾಹೇಬ್ ಪಾಟೀಲ, ಚನ್ನಮ್ಮನ ಇತಿಹಾಸವನ್ನು ದೇಶದ ಜನತೆಗೆ ಮುಟ್ಟಿಸಲು ಪ್ರತಿವರ್ಷ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ.
ಚನ್ನಮ್ಮನ ಕಿತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ. ಕಿತ್ತೂರಿನ ಐತಿಹಾಸಿಕ ಸ್ಥಳಗಳ ಜೀರ್ಣೊದ್ಧಾರಕ್ಕೆ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಒತ್ತಾಯಿಸಿದರು.
ಮಲಪ್ರಭಾ ಸಹಕಾರಿ ಕಾರ್ಖಾನೆದುಸ್ಥಿತಿಯಲ್ಲಿದ್ದು, ರೈತರ ಅನುಕೂಲಕ್ಕಾಗಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು ಹಾಗೂ ಕಿತ್ತೂರಿನ ಐತಿಹಾಸಿಕ ಸ್ಥಳಗಳನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಾಬಾಸಾಹೇಬ್ ಪಾಟೀಲ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಸಮಾರೋಪ ನುಡಿಗಳನ್ನಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್, ಉತ್ಸವಗಳು ಸಾಂಕೇತಿಕವಾಗಿರದೇ ಪ್ರೇರಣಾದಾಯಕವಾಗಿಸಬೇಕು ಎಂಬ ಕಾರಣಕ್ಕೆ ಪ್ರತಿವರ್ಷ ಅರ್ಥಪೂರ್ಣ ಉತ್ಸವವನ್ನು ಸರಕಾರ ಆಚರಿಸುತ್ತಿದೆ.
ಕಿತ್ತೂರು ದೇಶಪ್ರೇಮಿಗಳ ನೆಲ; ವೀರ ಪರಾಕ್ರಮಿಗಳ ನಾಡು. ಚನ್ನಮ್ಮನ ಹೋರಾಟ, ಆದರ್ಶವನ್ನು ನಾಡಿನುದ್ದಕ್ಕೂ ಪಸರಿಸಲು ಮುಂಬರುವ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ಉತ್ಸವವನ್ನು ಆಚರಿಸಬೇಕು.
ನಾಡಪ್ರೇಮದ ಗಟ್ಟಿತನ ಇಲ್ಲಿ ಇನ್ನಷ್ಟು ಬೇರೂರುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಚನ್ನಮ್ಮನ ಸಾಹಸಗಾಥೆಯನ್ನು ಜಗಕೆ ಸಾರಬೇಕು. ಕಿತ್ತೂರು ಒಂದು ಸ್ಥಳವಲ್ಲ; ಅದೊಂದು ಪ್ರೇರಣೆಯಾಗಿದ್ದು ಇದನ್ನು ಯುವಸಮುದಾಯಕ್ಕೆ ಮನದಟ್ಟು ಮಾಡುವ ಕೆಲಸವಾಗಬೇಕಿದೆ ಎಂದು ಹೇಳಿದರು.
ವಿಶೇಷ ಆಹ್ವಾನಿತರಾದ ಸಾಹಿತಿ ವಿನಯಾ ವಕ್ಕುಂದ, ನಾಡಿನ ರಕ್ಷಣೆಗಾಗಿ 200 ವರ್ಷಗಳ ಹಿಂದೆ ಕಿತ್ತೂರಿನಲ್ಲಿ ನಡೆದ ಹೋರಾಟವು ರೋಮಾಂಚನಗೊಳಿಸುತ್ತದೆ.
ಭಾರತದ ಸಂವಿಧಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂಬ ದೀಕ್ಷೆಯನ್ನು ತೆಗೆದುಕೊಳ್ಳುವ ಮೂಲಕ ಕಿತ್ತೂರಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು.
ಆಶೀರ್ವಚನ ನೀಡಿದ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕಿತ್ತೂರು ಚನ್ನಮ್ಮನ ಹೋರಾಟವು ಸ್ವಾಭಿಮಾನಕ್ಕೆ ನಿದರ್ಶನವಾಗಿದ್ದು, ಕಿತ್ತೂರು ಕೋಟೆಯನ್ನು ರಾಷ್ಟ್ರೀಯ ಸ್ಮಾರಕವಾಗಿಸಬೇಕು ಎಂದು ಒತ್ತಾಯಿಸಿದರು.
ನಿಚ್ಚಣಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮೀಜಿ, ಕಾದರವಳ್ಳಿ ಸೀಮಿಮಠದ ಡಾ.ಫಾಲಾಕ್ಷ ಶಿವಯೋಗೀಶ್ವರರು ಸಾನಿಧ್ಯ ವಹಿಸಿದ್ದರು. ಪ್ರಭಾರ ಜಿಲ್ಲಾಧಿಕಾರಿ ರಾಹುಲ್ ಶಿಂಧೆ ಸ್ವಾಗತಿಸಿದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಕರ್ನಾಟಕ ವಿಧಾನಸಭೆಯ ಸರಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಶಾಸಕರಾದ ಎನ್.ಎಚ್.ಕೋನರೆಡ್ಡಿ, ಆಸಿಫ್(ರಾಜು) ಸೇಠ, ವಿಶ್ವಾಸ್ ವೈದ್ಯ, ವಿಧಾನಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ವಾಯವ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನಿಲ್ ಹನಮಣ್ಣವರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ್ ನಾವಲಗಟ್ಟಿ, ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


