- ಹಾಲಕೆರೆ ಮಠದ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿದ ಸಚಿವೆ
- ಪ್ರಗತಿವಾಹಿನಿ ಸುದ್ದಿ, ಗದಗ: ಮಠ ಮಾನ್ಯಗಳನ್ನು ಆದರ್ಶವಾಗಿಟ್ಟುಕೊಂಡು ಎಲ್ಲರನ್ನು ಮೇಲೆ ತರಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಹಾಲಕೆರೆ ಮಠದ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ಮಠಾಧೀಶರ ತ್ಯಾಗವನ್ನು ಎಲ್ಲರೂ ಸ್ಮರಿಸಬೇಕು, ಸಮಾಜವನ್ನು ಉನ್ನತಮಟಕ್ಕೇರಿಸಲು ಎಲ್ಲರೂ ಕೈಜೋಡಿಸಬೇಕು. ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತಿಕ ಹೊಂದಿರುವ ಸಂಸ್ಕೃತಿ ನಮ್ಮದು. 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಭಾರತದಲ್ಲಿ ಸಂಸ್ಕೃತಿ ಉಳಿಯಲು ಮಠಗಳ ಪಾತ್ರ ಬಹುದೊಡ್ಡದು ಎಂದು ಹೇಳಿದರು.
ಕರ್ನಾಟಕದಲ್ಲಿರುವ ಬಹುತೇಕ ಮಠಗಳಲ್ಲಿ ಎಲ್ಲಾ ಮಠಾಧೀಶರು ಕೂಡ ಬಹಳಷ್ಟು ಕಿರಿಯರು, ಇದನ್ನೆಲ್ಲಾ ನೋಡಿದರೆ ಮುಂದಿನ 100 ವರ್ಷಗಳ ಕಾಲ ಭಾರತದ ಸಂಸ್ಕೃತಿ ಇನ್ನಷ್ಟು ಗಟ್ಟಿಯಾಗಿರಲಿದೆ ಎಂದು ತೋರಿಸುತ್ತದೆ ಎಂದರು.
- ಸರ್ಕಾರಕ್ಕೆ ಮಠಗಳ ಮಾರ್ಗದರ್ಶನ ಅಗತ್ಯ
ಭಾರತದಲ್ಲಿ ಸರ್ಕಾರಗಳಿಗೆ ಮಠಗಳ ಮಾರ್ಗದರ್ಶನ ಅತ್ಯಗತ್ಯ. ಸರ್ಕಾರಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿರುವುದೇ ಮಠಗಳು, ಮಠಾಧೀಶರು, ಅಕ್ಷರ ದಾಸೋಹ, ಅನ್ನ ದಾಸೋಹ, ಆರೋಗ್ಯ ದಾಸೋಹ, ಆಶ್ರಯ ದಾಸೋಹ ಹೀಗೆ ಎಲ್ಲವನ್ನು ಆರಂಭಿಸಿದ್ದೇ ಮಠಗಳು. ಸಮಾಜದ ಅಂಕುಡೊAಕುಗಳನ್ನು ತಿದ್ದುವಲ್ಲಿ ಮಠಗಳು ಪ್ರಮುಖ ಪಾತ್ರವಹಿಸುತ್ತಿವೆ. ಸಮಾಜದ ಏಳಿಗೆಗೆ ಟೊಂಕಕಟ್ಟಿ ನಿಂತುಕೊಂಡಿವೆ. ಇಂಥ ಮಠಗಳನ್ನು ಪಡೆದಿರುವ ನಾವೇ ಧನ್ಯರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘಿಸಿದರು. - ಮಾನವ ಜನ್ಮ ದೊಡ್ಡದು
ಜಗತ್ತಿನಲ್ಲಿ ಹಲವು ಜೀವರಾಶಿಗಳಿದ್ದರೂ ಮಾನವ ಜನ್ಮ ದೊಡ್ಡದು. ಸಮಾಜ ನಿನಗೇನು ಕೊಟ್ಟಿತು ಎನ್ನುವುದಕ್ಕಿಂತ ಸಮಾಜಕ್ಕೆ ನಿನೇನು ಕೊಟ್ಟೆ ಎನ್ನುವುದು ಮುಖ್ಯ. ನಾಲ್ಕು ಜನರು ನಮ್ಮನ್ನು ನೋಡಿ ನಮ್ಮನ್ನು ಕಲಿಯಬೇಕು. ನಾನು ಕೂಡ ಎಲ್ಲರಂತೆ ಸಾಮಾನ್ಯ ಕುಟುಂಬದಿಂದ ಬಂದವಳು. ಹುಟ್ಟು ಹೋರಾಟದ ಮನೋಭಾವದಿಂದ ಬಂದವಳು. ಹೀಗಾಗಿಯೇ ಇಂದು ರಾಜ್ಯ ಸಚಿವ ಸಂಪುಟದಲ್ಲಿ ಸಚಿವೆಯಾಗಿರುವೆ ಎಂದು ಹೇಳಿದರು.
- ಹೆಂಗಸರು ಕೂಡ ಮನೆ ನಡೆಸಲು ಕೈಜೋಡಿಸಬೇಕು
ಅಣ್ಣಾ ಬಸವಣ್ಣ 12ನೇ ಶತಮಾನದಲ್ಲೇ ಹೆಣ್ಣು ಗಂಡು ಸಮಾನರು ಎಂಬ ಸಂದೇಶ ಸಾರಿದ್ದರು. ಅಕ್ಕಮಹಾದೇವಿ ಹೇಳಿದಂತೆ ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಯೂ ಒಳ್ಳೆದಾಗಿರಬೇಕು. ಬರೀ ಹೆಣ್ಣುಮಕ್ಕಳಷ್ಟೇ ಸಂಸ್ಕೃತಿ ಕಲಿತರೆ ಸಾಲದು, ಹೆಣ್ಣು ಸಂಸಾರದ ಕಣ್ಣು ಎಂಬಂತೆ ಗಂಡು ಕೂಡ ಮನೆಯ ಕಣ್ಣು ಎಂಬ ಮನೋಭಾವ ಎಲ್ಲರಲ್ಲೂ ಮೂಡಬೇಕು. ಆಗಷ್ಟೆ ಸಮಾಜದಲ್ಲಿ ಸಮಾನತೆ ತರಲು ಸಾಧ್ಯ. ಹೆಣ್ಣು ಇವತ್ತು ಯಾವುದಕ್ಕೂ ಕಡಿಮೆ ಇಲ್ಲ. ಆದರೆ, ನಮ್ಮ ಹಕ್ಕಿಗೆ ನಾವು ಹೋರಾಡಬೇಕಾಗಿದೆ ಎಂದು ಸಚಿವರು ಹೇಳಿದರು.
ಮನೆಗೆ ಹೆಣ್ಣು ದೀಪ ಆಗಬೇಕು, ಹೆಸರು ತರಬೇಕು ನಿಜ. ಹೆಣ್ಣನ್ನ ಗಂಗೆ, ಭೂಮಿಗೆ ಹೋಲಿಸಲಾಗಿದೆ. ಮಹಿಳಾ ಸಮಬಲೀಕರಣದ ಬಗ್ಗೆ ಮಾತನಾಡುತ್ತೇವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲೀಕರಣ ಆಗಬೇಕು. ದೇಶ, ರಾಜ್ಯ ಬೆಳೆಯಬೇಕು ಅಂದರೆ ಹೆಣ್ಣು ಸಬಲರಾಗಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಎಲ್ಲರೂ ಮೇಲೆ ಬರಬೇಕು. ಮಠಾಧೀಶರ ತ್ಯಾಗದ ಫಲವೇ ಸಮಾಜ ಕೂಡ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ. ಇಂಥ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಅದೃಷ್ಟ, ಎಲ್ಲಿಯವರೆಗೆ ಸ್ವಾಮೀಜಿಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾರೋ ಅಲ್ಲಿಯವರೆಗೆ ನಮ್ಮ ಸಮಾಜ ಗಟ್ಟಿಯಾಗಿರುತ್ತದೆ. ಸಮಾಜಕ್ಕೆ ಉತ್ತಮ ಹೆಸರು ತರುವ ಕೆಲಸ ಮಾಡಬೇಕು, ತಂದೆ ತಾಯಿಗೆ ಉತ್ತಮ ಹೆಸರು ತರಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
- ಮಹಿಳೆಯರಿಗೆ ರಾಜಕಾರಣ ತುಂಬಾ ಕಷ್ಟ
ಇವತ್ತು ರಾಜಕಾರಣ ಕಷ್ಟ, ಇಲ್ಲಿ ಕ್ಷಣಕ್ಷಣಕ್ಕೂ ಅಗ್ನಿಪರೀಕ್ಷೆ ಎದುರಾಗುತ್ತೆ, ಅದರಲ್ಲೂ ಮಹಿಳೆಯರಿಗಂತೂ ತುಂಬಾ ಕಷ್ಟ. ರಾಜಕಾರಣದಲ್ಲಿ ಪುರುಷರು 100 ಮೀಟರ್ ಓಡಿ ಬಹುಮಾನ ಪಡೆಯುತ್ತಾರೆ, ಆದರೆ, ಮಹಿಳೆ ಸಾವಿರ ಮೀಟರ್ ಓಡಿದರೂ ಕಷ್ಟ. ಇದೊಂದು ಮಹಿಳೆಯರ ಪಾಲಿಗೆ ಸವಾಲಿನ ಕ್ಷೇತ್ರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಈ ವೇಳೆ ಸಚಿವರು ಅಕ್ಕಮಹಾದೇವಿ ಮಾತೃ ಬಳಗಕ್ಕೆ ಸಹ ಚಾಲನೆ ನೀಡಿದರು.
ಹಾಲಕೆರೆ ಮಠದ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಪೂಜ್ಯಶ್ರೀ ಮ.ನಿ.ಪ್ರ ಸಿದ್ದಲಿಂಗ ಮಹಾಸ್ವಾಮಿಗಳು, ಸಂತೆಕಲ್ಲೂರಿನ ಘನಮಠೇಶ್ವರಮಠದ ಪೂಜ್ಯಶ್ರೀ ಮ.ನಿ.ಪ್ರ ಗುರುಬಸವ ಮಹಾಸ್ವಾಮಿಗಳು, ನೀಲಗುಂದದ ಪೂಜ್ಯಶ್ರೀ ಮ.ನಿ.ಪ್ರ ಪ್ರಭುಲಿಂಗ ಮಹಾಸ್ವಾಮಿಗಳು, ಕರೇಗುಡ್ಡ ಮಹಾಂತೇಶ್ವರ ಮಠದ ಪೂಜ್ಯಶ್ರೀ ಷ.ಬ್ರ ಮಹಾಂತಲಿಂಗ ಶಿವಾಚಾರ್ಯರು, ವಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಪೂಜ್ಯಶ್ರೀ ಮ.ನಿ.ಪ್ರ ಬಸವಲಿಂಗ ಮಹಾಸ್ವಾಮಿಗಳು, ಖೇಳಗಿ ಶ್ರೀ ಶಿವಲಿಂಗೇಶ್ವರಮಠದ ಪೂಜ್ಯಶ್ರೀ ಮ.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳು, ಸೋಮಸಮುದ್ರದ ಪೂಜ್ಯಶ್ರೀ ಸಿದ್ದಲಿಂಗ ದೇಶಿಕರು, ಶ್ರೀಧರಗಡ್ಡೆಯ ಪೂಜ್ಯಶ್ರೀ ಮರಿಕೊಟ್ಟೂರು ದೇಶಿಕರು, ರೋಣ ಅಕ್ಕನಬಳಗದ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಜಿ. ಪಾಟೀಲ, ಹಾಲಕೆರೆ ಕೆ.ವಿ.ಜಿ ಬ್ಯಾಂಕಿನ ಮ್ಯಾನೆಜರ್ ಶ್ರೀಮತಿ ಕದಿರಿ ಶ್ರೀರಿತಾ, ವೀಣಾ ಪಾಟೀಲ್, ಅನ್ನಪೂರ್ಣ ಪಾಟೀಲ, ಕಮಲಾ ಹುನಗುಂದ, ಹಾಲಕೆರೆ ಮಠದ ಭಕ್ತರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ