
ನೆರೆಯಿಂದ ಮನೆ ಕಳೆದುಕೊಂಡವರಿಗೆ ರಿಯಾಯಿತಿಯಲ್ಲಿ ಎಂ ಸ್ಯಾಂಡ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಹಿಂದೆಂದೂ ಕಾಣದ ರೀತಿಯಲ್ಲಿ ಪ್ರವಾಹ ಅಪ್ಪಳಿಸಿ ಜನಜೀವನವನ್ನು ಜಲಜೀವನವನ್ನಾಗಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಬೆಳಗಾವಿ ಜಿಲ್ಲೆಯಲ್ಲಿ ಸಾವಿರಾರು ಮನೆಗಳು ನೆಲಕಚ್ಚಿವೆ. ಸಂತ್ರಸ್ತರು ಮತ್ತೆ ಬದುಕು ಕಟ್ಟಿಕೊಳ್ಳುವುದಕ್ಕೆ ಹರಸಾಹಸ ಪಡಬೇಕಿದೆ.
ಪ್ರವಾಹ ಸಂತ್ರಸ್ತರ ನೆರವಿಗೆ ನಾಡಿನ ಜನ ಹಲವಾರು ರೀತಿಯಲ್ಲಿ ಮುಂದೆ ಬಂದಿದ್ದಾರೆ. ಸಂಘ-ಸಂಸ್ಥೆಗಳು, ಸಾರ್ವಜನಿಕರು ತಮ್ಮ ಕೈಲಾದ ನೆರವು ನೀಡುತ್ತ ಬಂದಿದ್ದಾರೆ. ಈಗ ಯರಗಟ್ಟಿಯಲ್ಲಿರುವ ಡಾಲ್ಫಿನ್ ಎಂ ಸ್ಯಾಂಡ್ ಘಟಕ ಕೂಡ ಸಂತ್ರಸ್ತರ ನೆರವಿಗೆ ಮುಂದಾಗಿದೆ.
ಸಂತ್ರಸ್ತರು ಮನೆ ಕಟ್ಟಿಕೊಳ್ಳಲು ರಿಯಾಯಿತಿ ದರದಲ್ಲಿ ಉಸುಕು ನೀಡಲು ಡಾಲ್ಫಿನ್ ಎಂ ಸ್ಯಾಂಡ್ ಘಟಕ ನಿರ್ಧರಿಸಿದೆ. ಶೇ.10ರಿಂದ 15ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವವರಿಗೆ ಹೆಚ್ಚು ರಿಯಾಯಿತಿ ಸಿಗಲಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಸಂತ್ರಸ್ತರ ಕಣ್ಣೀರು ಕಂಡಿದ್ದೇವೆ. ಪ್ರವಾಹದ ಸಂದರ್ಭದಲ್ಲೂ ಸಂಕಷ್ಟದಲ್ಲಿರುವವರಿಗೆ ನಮ್ಮಿಂದಾದ ನೆರವು ನೀಡಿದ್ದೇವೆ. ಈಗ ಅವರು ಪುನಃ ಮನೆ ಕಟ್ಟಿಕೊಂಡು ಬದುಕು ಪುನರ್ ರೂಪಿಸಿಕೊಳ್ಳಲು ಇದು ನಮ್ಮ ಅಳಿಲು ಸೇವೆ ಅಷ್ಟೆ.
-ಪಾಂಡುರಂಗ ರಡ್ಡಿ, ಸವಿತಾ ರಡ್ಡಿ
(ಡಾಲ್ಫಿನ್ ಎಂ ಸ್ಯಾಂಡ್ ಮಾಲಿಕರು)
(ಆಸಕ್ತರು ಸಂಪರ್ಕಿಸಿ -8277805087, 8088807550)
ಮಲಪ್ರಭಾ ನದಿಯ ಅಮೂಲ್ಯವಾದ ಉಸುಕನ್ನು ರಕ್ಷಿಸುವಂತೆ ಕನ್ನಡ ಸಂಘಟನೆಗಳು ಮನವಿ ಸಲ್ಲಿಸಿವೆ. ಇದೇ ವೇಳೆ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು ರಿಯಾಯಿತಿ ದರದಲ್ಲಿ ಮರಳು ನೀಡಲು ಡಾಲ್ಫಿನ್ ಎಂ ಸ್ಯಾಂಡ್ ಮುಂದೆ ಬಂದಿದೆ.
ಅಮೂಲ್ಯವಾದ ಉಸುಕನ್ನು ಸಂರಕ್ಷಿಸಿ
ಇತ್ತೀಚಿಗೆ ಮಲಪ್ರಭಾ ನದಿಗೆ ಬಂದ ಪ್ರವಾಹದ ನೀರು ಇಳಿದು ಹೋದ ನಂತರ, ಅಚ್ಚರಿಯ ರೀತಿಯಲ್ಲಿ, ೪೦ ವರ್ಷಗಳ ನಂತರ, ರಾಮದುರ್ಗ ಹಾಗೂ ಸವದತ್ತಿ ತಾಲೂಕುಗಳ ಮಲಪ್ರಭಾ ದಡದಲ್ಲಿ ಶೇಖರಣೆಗೊಂಡಿರುವ ಅಮೂಲ್ಯವಾದ ಉಸುಕನ್ನು ಸಂರಕ್ಷಿಸಲು ಕ್ರಮ ಕೈಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಇಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.
ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬೂದಪ್ಪ ಅವರಿಗೆ ಮನವಿ ಸಲ್ಲಿಸಿರುವ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಕಾರ್ಯಧ್ಯಕ್ಷ ಶಿವಪ್ಪ ಶಮರಂತ ಅವರು, ಉಸುಕಿನ ನಿರಂತರ ಲೂಟಿಯ ಪರಿಣಾಮವಾಗಿ ೧೯೮೦ ರ ನಂತರ ನದಿಯಲ್ಲಿ ಆಪು ಎಂಬ ವಿಷಕಾರಿ ಬೆಳೆ ಬೆಳೆದು ನಿಂತು ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತು ಎಂದು ವಿವರಿಸಿದ್ದಾರೆ.
ಉಸುಕಿನ ಅಕ್ರಮ ಸಾಗಾಟದಿಂದಾಗಿ ನದಿಯ ಇಕ್ಕೆಲಗಳಲ್ಲಿ ಅತಿಕ್ರಮಣವಾಗಿ ನದಿಯ ಗಾತ್ರವು ಸಹ ಕಡಿಮೆಯಾಯಿತು. ಅತಿಕ್ರಮಣ ಹಾಗೂ ವಿಷಕಾರಿ ಆಪು ಬೆಳೆಯ ನಿರ್ಮೂಲನೆಗಾಗಿ ನಾಗರಿಕರು ನಾಲ್ಕು ದಶಕಗಳಿಂದ ಹೋರಾಟ ನಡೆಸಬೇಕಾಯಿತು.
ಈಗ ನಿಸರ್ಗವೇ ಉಸುಕನ್ನು ನದಿ ತೀರದ ಜನತೆಗೆ ಕೊಡುಗೆಯಾಗಿ ನೀಡಿದೆ. ನಿಸರ್ಗ ಪ್ರಿಯರು ನಿತ್ಯ ಸಂಜೆ ನದಿ ತೀರದಲ್ಲಿ ಕುಳಿತು ನಾಲ್ಕು ದಶಕಗಳ ಹಿಂದಿನ ವೈಭವ ಮರುಕಳಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಉಸುಕಿನ ಸಂರಕ್ಷಣೆಗಾಗಿ ಪಣತೊಟ್ಟಿದ್ದಾರೆಂದು ಮನವಿಯಲ್ಲಿ ತಿಳಿಸಲಾಗಿದೆ.
ಉಸುಕಿನ ಸಂರಕ್ಷಣೆ ಸಂಬಂಧ ಪೋಲಿಸ್ ಇಲಾಖೆಗೆ, ಬೈಲಹೊಂಗಲ ಉಪವಿಭಾಗಾಧಿಕಾರಿಗಳಿಗೆ ಹಾಗೂ ರಾಮದುರ್ಗ ಮತ್ತು ಸವದತ್ತಿ ತಹಶಿಲ್ದಾರರಿಗೆ ಸೂಕ್ತ ನಿರ್ದೇಶನ ನೀಡಬೇಕಲ್ಲದೆ ನದಿಯ ದಡದಲ್ಲಿ ಉಸುಕು ಸಾಗಾಟದ ವಿರುದ್ಧ ಎಚ್ಚರಿಕೆಯ ನಾಮಫಲಕಗಳನ್ನು ಅಳವಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂಬಂಧ ಕಂದಾಯ ಮತ್ತು ಪೋಲಿಸ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಲಾಗುವುದೆಂದು ಅಪರ ಜಿಲ್ಲಾಧಿಕಾರಿಗಳು ಕ್ರಿಯಾ ಸಮಿತಿಯ ಪದಾಧಿಕಾರಿಗಳಿಗೆ ಭರವಸೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ