ಪ್ರಗತಿವಾಹಿನಿ ಸುದ್ದಿ; ಕಾರವಾರ: ಸಾಗರಮಾಲಾ ಯೋಜನೆ ಅಡಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಮತ್ತು ಸಾರ್ವಜನಿಕರು ನಡೆಸುತ್ತಿರುವ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮೀನುಗಾರರು ಕರೆ ನೀಡಿದ್ದ ಕಾರವಾರ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರತಿಭಟನೆ ಹಿನ್ನಲೆಯಲ್ಲಿ ಇಡೀ ಕಾರವಾರ ಸಂಪೂರ್ಣ ಬಂದ್ ಆಗಿದೆ.
ಕಾರವಾರದ ವಾಣಿಜ್ಯ ಬಂದರು 2ನೇ ಹಂತದ ವಿಸ್ತರಣೆ ವಿರೋಧಿಸಿ ಮೀನುಗಾರರು ಕಾರವಾರ ಬಂದ್ ಗೆ ಕರೆ ನೀಡಿದ್ದು, ಇಂದು ಬೆಳಗ್ಗೆ ಎರಡು ಸಾವಿರಕ್ಕೂ ಹೆಚ್ಚು ಮಿನುಗಾರರು ಕಾರವಾರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಕಡಲ ತೀರ ಉಳಿಸಿ ಎಂಬ ಘೋಷಣೆಗಳನ್ನು ಕೂಗಿದರು. ಅಲ್ಲದೆ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಿದ್ದು, ಬಸ್, ಟೆಂಪೋ, ಆಟೋ ರಿಕ್ಷಾ ಮೊದಲಾದ ಯಾವುದೇ ವಾಹನಗಳು ರಸ್ತೆಗೆ ಇಳಿದಿಲ್ಲ. ಅಂಗಡಿ ಮುಂಗಟ್ಟುಗಳು ಕೂಡ ಬಾಗಿಲೆಳೆದುಕೊಂಡಿದ್ದು, ವ್ಯಾಪಾರ ಪೂರ್ಣ ಪ್ರಮಾಣದಲ್ಲಿ ನಿಂತಿದೆ. ಬ್ಯಾಂಕ್ ಆಸ್ಪತ್ರೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಒಟ್ಟಾರೆ ಕಾರವಾರ ಸಂಪೂರ್ಣ್ ಸ್ಥಬ್ಧವಾಗಿದೆ.
ಸೋಮವಾರ ಸಾಗರಮಾಲಾ ಯೋಜನೆ ಅಡಿ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಮೊದಲ ಬಾರಿಗೆ ಪ್ರತಿಭಟನೆಗೆ ಇಳಿದಿದ್ದರು. ಅಂದಿನಿಂದ ಇಂದಿನವರೆಗೂ ಪ್ರತಿಭಟನೆ ಮುಂದುವರೆದಿದೆ. ಸಾಗರಮಾಲಾ ಯೋಜನೆ ವಿರೋಧಿಸಿ ಮೀನುಗಾರರು ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭತನೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೀನುಗಾರ ಸಂಘಟನೆಗಳು ಕೂಡ ಬೆಂಬಲ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿವೆ.
ಸಾಗರಮಾಲಾ ಯೋಜನೆಯಡಿಯಲ್ಲಿ ಕಾರವಾರ ಬಂದರಿನ ವಿಸ್ತರಣೆಗೆ ಪೂರಕ ಅಲೆ ತಡೆಗೋಡೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬಂದರಿನ ವಿಸ್ತರಣೆಯಿಂದ ಮೀನುಗಾರಿಕೆಗೆ ಅಡ್ಡಿಯುಂಟಾಗುವುದಲ್ಲದೇ ಕಾರವಾರ ಬೀಚ್ ಸಹ ಯೋಜನೆಯಿಂದ ನಾಶವಾಗಲಿದೆ ಎಂದು ಮೀನುಗಾರರು ಹಾಗೂ ವಿವಿಧ ಸಂಘಟನೆಗಳು ಆತಂಕ ವ್ಯಕ್ತಪಡಿಸಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ