*ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣ ಹಾಗೂ ಶಾಸಕಿ ವಿರುದ್ಧ ಹಾಕಿರುವ ಪೋಸ್ಟ್ ಖಂಡಿಸಿ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣ ಹಾಗೂ ಬಿಜೆಪಿ ಶಾಸಕಿಗೆ ಶ್ರದ್ಧಾಂಜಲಿ ಹಾಕಿ ಪೋಸ್ಟ್ ನ್ನು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಇಂದು ಬೆಳಗಾವಿ ನಗರದಲ್ಲಿ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾವತಿಯಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಹುಬ್ಬಳ್ಳಿ, ನಗರದಲ್ಲಿ ಕಳೆದ ಬುಧವಾರ ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿಯವರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ನಾಗರೀಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಮಹಿಳೆಯರಿಗೆ ಪವಿತ್ರ ಸ್ಥಾನ ನೀಡುವ ಈ ಸಮಾಜದಲ್ಲಿ ರಾಜಕೀಯ ದ್ವೇಷಕ್ಕಾಗಿ ಒಬ್ಬ ಮಹಿಳೆ ಎಂದು ನೋಡದೆ, ಸಾರ್ವಜನಿಕವಾಗಿ ದೌರ್ಜನ್ಯ ಎಸಗಲು ಪೊಲೀಸರಿಗೆ ಕುಮ್ಮಕ್ಕು ನೀಡಿದ್ದು ನಾಚಿಕೆಗೇಡಿನ ಸಂಗತಿ. ಪೊಲೀಸ್ ಇಲಾಖೆಯ ಮೇಲೆ ಸರ್ಕಾರದ ನಿಯಂತ್ರಣ ಇಲ್ಲದಿರುವುದು ಈ ಘಟನೆಯೇ ಸಾಕ್ಷಿಯಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಅವರು ನೀಡಿದ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಮೇಲೆ ಪೊಲೀಸರು ತಮ್ಮ ದರ್ಪವನ್ನು ಪ್ರದರ್ಶಿಸಿರುವುದು ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತರು ಹಾಗೂ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಸುಳ್ಯದ ಶಾಸಕಿ ಭಾಗಿರಥಿ ಮುರುಳ್ಯ ರವರನ್ನು ತೇಜೋವಧೆ ಮಾಡುವ ಪೋಸ್ಟ್ ನ್ನು ಹಾಕಲಾಗಿದೆ. ಈ ರೀತಿಯ ಶ್ರದ್ಧಾಂಜಲಿ ಪೋಸ್ಟ್ ಹಾಕಿರುವುದನ್ನು ನೋಡಿದರೆ, ಇವರ ಮನಸ್ಥಿತಿಯೇನು ಎಂದು ಅರ್ಥ ಆಗುತ್ತದೆ. ದಲಿತ ಶಾಸಕಿಗೆ ಈ ಅಪಮಾನ ಮಾಡಿರುವುದು ತೀವ್ರ ಖಂಡನೀಯ, ಆರೋಪಿ ಮೇಲೆ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.



