*ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಾಮರ್ಥ್ಯ ಸಾಬೀತುಪಡಿಸಿ:* *ಯುವ ಕಾರ್ಯಕರ್ತರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ*


* *ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಯುವ ಪರ್ವ ಪ್ರತಿಜ್ಞೆ ಕಾರ್ಯಕ್ರಮ*
* *ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಾಣುವ ಪಕ್ಷ ಕಾಂಗ್ರೆಸ್*
ಪ್ರಗತಿವಾಹಿನಿ ಸುದ್ದಿ,*ಬೈಲಹೊಂಗಲ:* ಯುವ ಕಾಂಗ್ರೆಸ್ ಕಾರ್ಯಕರ್ತರೇ ಪಕ್ಷದ ಭವಿಷ್ಯ, ಗಾಂಧಿ ತತ್ವ, ಬಸವಣ್ಣನ ತತ್ವದಡಿಯಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟರು.
ಬೈಲಹೊಂಗಲದ ಬಿ.ಬಿ.ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬೆಳಗಾವಿ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಯುವ ಪರ್ವ ಪ್ರತಿಜ್ಞೆ – 2025 ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಯುವಕರೇ ಕಾಂಗ್ರೆಸ್ ಪಕ್ಷದ ಶಕ್ತಿ, ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಾಣುವ ಪಕ್ಷ ನಮ್ಮದು ಎಂದರು.

26 ವರ್ಷಗಳ ಹಿಂದೆ ಸಾಮಾನ್ಯ ಕಾರ್ಯಕರ್ತೆಯಾಗಿ ಪಕ್ಷದಲ್ಲಿ ಗುರುತಿಸಿಕೊಂಡ ನಾನು ಇಂದು ಸಚಿವೆಯಾಗಿರುವೆ. ಇದಕ್ಕೆ ಪ್ರಮುಖ ಕಾರಣ ನಾನು ಉಳಿಸಿಕೊಂಡು ಬಂದಿರುವ ಪಕ್ಷ ನಿಷ್ಠೆ, ಸಿದ್ದಾಂತ. ಮುಖ್ಯಮಂತ್ರಿ ಸಿದ್ದರಾಯಮ್ಮ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವರಿಷ್ಠರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಆಶೀರ್ವಾದದಿಂದ ಇಂದು ರಾಜ್ಯದ ಏಳೂವರೆ ಕೋಟಿ ಜನ ಸಂಖ್ಯೆಯಲ್ಲಿ ನಾನೊಬ್ಬಳೇ ಮಹಿಳಾ ಮಂತ್ರಿಯಾಗಿರುವೆ, ಇದು ನನಗೆ ಪಕ್ಷ ಮಾಡಿರುವ ಉಪಕಾರ ಎಂದು ಹೇಳಿದರು.
ಇವತ್ತು ದೇಶದ ಗಡಿಯನ್ನು ಕಾಯಲು ಬಿಸಿ ರಕ್ತದ ಯುವಕರನ್ನು ಆರಿಸಿ ಕಳುಹಿಸುತ್ತೇವೆ. 19 ರಿಂದ 25 ವರ್ಷದ ಯುವಕರನ್ನೇ ಆಯ್ಕೆ ಮಾಡುತ್ತೇವೆ. ದೇಶದ ಭವಿಷ್ಯ ಕೂಡ ಯುವಕರ ಕೈಯಲ್ಲಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ನಮ್ಮ ಪಕ್ಷದ ಸಿದ್ದಾಂತ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಯಾರು ಕೂಡ ಏಕಾಏಕಿ ಮುಖ್ಯಮಂತ್ರಿ, ಮಂತ್ರಿ, ಶಾಸಕರಾಗಲು ಸಾಧ್ಯವಿಲ್ಲ. ರಾಜಕಾರಣಕ್ಕೆ ಬರುವಾಗ ತತ್ವ ಸಿದ್ದಾಂತ, ಗುರಿಯನ್ನು ಇಟ್ಟುಕೊಂಡು ಬರಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕು. ಚುನಾವಣೆಗೆ ನಿಲ್ಲುವುದೇ ಗುರಿಯಾಗಬಾರದು. ಬೂತ್ ಮಟ್ಟದಲ್ಲಿ ಹಿಡಿತ ಸಾಧಿಸಿಕೊಂಡು ದೊಡ್ಡ ದೊಡ್ಡ ನಾಯಕರೇ ನಿಮ್ಮ ಮನೆ ಬಳಿಗೆ ಹುಡುಕಿಕೊಂಡು ಬರುವಂತಾಗಬೇಕು ಎಂದು ಕರೆ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನನ್ನ ಗೆಲುವಿನ ಪಾತ್ರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಪಾತ್ರ ದೊಡ್ಡದು. ಯುವ ಕಾರ್ಯಕರ್ತರ ದೊಡ್ಡ ಪಡೆಯೇ ನನ್ನ ಬೆನ್ನಿಗಿದೆ ಎಂದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕರಾದ ಮಹಾಂತೇಶ್ ಕೌಜಲಗಿ, ಬಾಬಾಸಾಹೇಬ್ ಪಾಟೀಲ, ವಿಶ್ವಾಸ್ ವೈದ್ಯ, ಮುಖಂಡರಾದ ಮಹಾಂತೇಶ್ ಕಡಾಡಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಮುಂಜುನಾಥ್ ಎಚ್.ಎಸ್, ಮೃಣಾಲ್ ಹೆಬ್ಬಾಳಕರ್, ವಿನಯ ನಾವಲಗಟ್ಟಿ, ರಾಹುಲ್ ಜಾರಕಿಹೊಳಿ, ಕಾರ್ತಿಕ ಪಾಟೀಲ್, ದೀಪಿಕಾ ರೆಡ್ಡಿ, ಅಬ್ದುಲ್ ದೇಸಾಯಿ ಉಪಸ್ಥಿತರಿದ್ದರು.