*ಲಂಚಕ್ಕೆ ಕೈಯೊಡ್ಡಿದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮತ್ತೋರ್ವ PSI*

ಪ್ರಗತಿವಾಹಿನಿ ಸುದ್ದಿ: ಲಂಚಕ್ಕೆ ಬೇಡಿಕೆ ಇಟ್ಟ ಪೊಲೀಸ್ ಸಿಬ್ಬಂದಿಯೇ ಲೋಕಾಯುಕ್ತ ಬಲೆಗೆ ಬೀಳುತ್ತಿರುವ ಘಟನೆ ದಿನವೊಂದರಂತೆ ಬೆಳಕಿಗೆ ಬರುತ್ತಿದೆ. 40 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಪಿಎಸ್ಐ ಓರ್ವರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ತುಮಕೂರು ಗ್ರಾಮಾಂತರ ಠಾಣೆ ಪಿಎಸ್ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾರೊಂದನ್ನು ವಶಕ್ಕೆ ಪಡೆದಿದ್ದ ಪಿಎಸ್ಐ ಚೇತನ್ ಕುಮಾರ್, ಕಾರಿನಲ್ಲಿ ಅನುಮಾನಾಸ್ಪದ ವಸ್ತು ಇದೆ ಎಂದು ಠಾಣೆಗೆ ಕರೆ ತಂದಿದ್ದಾರೆ. ಬಳಿಕ ಕಾರು ಬಿಡದೇ ಪ್ರಕರಣವನ್ನೂ ದಾಖಲಿಸದೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು ಮೂಲದ ವ್ಯಕ್ತಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಕಾತ್ರು ಬಿಡಬೇಕೆಂದರೆ 1 ಲಕ್ಷ ರೂಪಾಯಿಗೆ ನೀಡುವಂತೆ ಕೇಳಿದ್ದಾರೆ. ಬಳಿಕ 40 ಸಾವಿರ ರೂಪಾಯಿಗೆ ಡೀಲ್ ಮಾಡಿಕೊಂಡಿದ್ದಾರೆ. ಈ ಹಣವನ್ನು ಟೋಲ್ ನ ಅಂಗಡಿಯೊಂದರಲ್ಲಿ ಕೊಡಲು ಪಿಎಸ್ ಐ ಹೇಳಿದ್ದರು. ಅಂಗಡಿಗೆ ಹಣ ಕೊಡಲು ಬರುವವನ ಫೋಟೋವನ್ನು ಅಂಗಡಿಯವನಿಗೆ ರವಾನಿಸಿದ್ದರು. ಅಂಗಡಿಯವನ ಮೊಬೈಲ್ ಪರಿಶೀಲಿಸಿದಾಗ ಪಿಎಸ್ಐ ಪಾತ್ರ ಬಯಲಾಗಿದ್ದು, ಹಣ ಪಡೆಯಲು ಬಂದ ಪಿಎಸ್ ಐ ಚೇತನ್ ಲೋಕಾಯುಕ್ತ ಬಲೆಗೆ ಬಿದ್ದಿದಾರೆ.



