ಪ್ರಗತಿವಾಹಿನಿ ಸುದ್ದಿ: ಯಾದಗಿರಿ ಸೈಬರ್ ಕ್ರೈಂ ಠಾಣೆ ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಪುತ್ರನ ವಿರುದ್ಧ ದೂರು ನೀಡಲಾಗಿದೆ.
ಕಳೆದ ಮೂರು ವರ್ಷಗಳಿಂದ ಪಿಎಸ್ಐ ಪರಶುರಾಮ್ ಯಾದಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿತ್ತು. ಅನುಮಾನಾಸ್ಪದ ರೀತಿಯಲ್ಲಿ ಪರಶುರಾಮ್ ಮೃತಪಟ್ಟಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ ಪರಶುರಾಮ್ ಕುಟುಂಬದವರು ಶಾಸಕರ ಹಾಗೂ ಅವರ ಪುತ್ರನ ಕಿರುಕುಳ, ಪೋಸ್ಟಿಂಗ್ ಗಾಗಿ ಲಕ್ಷ ಲಕ್ಷ ಹಣ ಕೇಳಿ ಹಿಂಸಿಸಿದ್ದೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಶಾಸಕ ಚೆನ್ನಾರೆಡ್ಡಿ ಯಾದಗಿರಿ ಠಾಣೆಗೆ ಪರಶುರಾಮ್ ಪೋಸ್ಟಿಂಗ್ ಗಾಗಿ 30 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. 30 ಲಕ್ಷ ಹಣ ನೀಡಿ ಯಾದಗಿರಿ ನಗರಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಆದರೆ ಒಂದು ವರ್ಷ ಪೂರೈಸುವ ಮೊದಲೇ ಪರಶುರಾಮ್ ಅವರನ್ನು ಮತ್ತೆ ಯಾದಗಿರಿ ಸೈಬರ್ ಕ್ರೈಂ ಠಾಣೆಗೆ ವರ್ಗಾಯಿಸಲಾಗಿದೆ. ಪಿಎಸ್ಐ ಹುದ್ದೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ವರ್ಗಾವಣೆಗಾಗಿಯೂ ಪದೇ ಪದೇ ಶಾಸಕರು ಹಣಕ್ಕೆ ಬೇಡಿಕೆ ಒಡ್ಡುತ್ತಿದ್ದರು. ಸಾಲದ ಸುಳಿಗೆ ಸಿಲುಕಿದ್ದ ಪರಶುರಾಮ್ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಇದೇ ಒತ್ತಡದಿಂದ ಸಾವನ್ನಪ್ಪಿದ್ದಾರೆ. ಪತಿಯ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿ ಪರಶುರಾಮ್ ಪತ್ನಿ ಶ್ವೇತಾ ಯಾದಗಿರಿ ಎಸ್ ಪಿ ಸಂಗೀತಾ ಅವರಿಗೆ ದೂರು ನೀಡಿದ್ದಾರೆ. ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪಣ್ಣಗೌಡ ವಿರುದ್ಧ ದೂರು ದಾಖಲಿಸಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ