ಪ್ರಗತಿವಾಹಿನಿ ಸುದ್ದಿ: ಪಿಎಸ್ಐ ಕಿರಿಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಮೃತ ದುರ್ದೈವಿ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೋಯಿಡಾದ ರಾಮನಗರ ಪಿಎಸ್ಐ ಬಸವರಾಜ್ ವಿರುದ್ಧ ಭಾಸ್ಕರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ. ಇದರಿಂದ ಬಸವರಾಜ್, ಭಾಸ್ಕರ್ ಅವರಿಗೆ ನಿರಂತರವಾಗಿ ತೊಂದರೆ ಕೊಡಲು ಆರಂಭಿಸಿದ್ದರು. ಪಿಎಸ್ಐ ಕಿರುಕುಳಕ್ಕೆ ನೊಂದು ರಾಮನಗರದಲ್ಲಿದ್ದ ಕೆಲಸ ಬಿಟ್ಟು ಜೋಯಿಡಾದಲ್ಲಿ ಭಾಸ್ಕರ್ ಕೆಲಸಕ್ಕೆ ಸೇರಿದ್ದರಂತೆ.
ಕೆಲ ದಿನಗಳ ಹಿಂದೆ ಜಮೀನು ವಿಚಾರವಾಗಿ ಪೊಲೀಸರು ಭಾಸ್ಕರ್ ಮಾವ ಗಣಪತಿ ಎಂಬುವವರಿಗೆ ನೋಟಿಸ್ ನೀಡಿದ್ದರು. ಇದರಿಂದ ಭಾಸ್ಕರ್ ತನಗೆ ತೊಂದರೆ ಕೊಟ್ಟಿದ್ದೂ ಅಲ್ಲದೇ ತನ್ನ ಮಾವನಿಗೂ ಪೊಲೀಸರು ತೊಂದರೆ ಕೊಡಲು ಶುರುಮಾಡಿದರು ಎಂದು ಪೊಲೀಸ್ ಠಾಣೆಗೆ ಹೋಗಿ ಪ್ರಶ್ನಿಸಿದ್ದರಂತೆ. ಈ ವೇಳೆ ಪೊಲೀಸರು ಹಾಗೂ ಭಾಸ್ಕರ್ ನಡುವೆ ವಾಗ್ವಾದ ನಡೆದಿದೆ. ಕುಡಿದು ಬಂದು ಪೊಲೀಸ್ ಠಾಣೆಯಲ್ಲಿ ದುರ್ವರ್ತನೆ ತೋರುತ್ತಿದ್ದೀಯಾ ಎಂದು ಪೊಲೀಸರು ಹಲ್ಲೆ ನಡೆಸಿದ್ದಾರೆ. ಬೈಕ್ ಕೀ ವಶಕ್ಕೆ ಪಡೆದು ಬೇರೆಯವರನ್ನು ಕರೆಸಿ ಗಾಡಿ ತೆಗೆದುಕೊಂಡು ಹೋಗು ಎಂದು ಗುಡುಗಿದ್ದಾರೆ ಎನ್ನಲಾಗಿದೆ.
ಪೊಲೀಸರ ವರ್ತನೆಗೆ ನೊಂದ ಭಾಸ್ಕರ್ ಪೊಲೀಸ್ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಪೊಲೀಸರು ಬೆಂಕಿ ನಂದಿಸಿ ಭಾಸ್ಕರ್ ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಭಾಸ್ಕರ್ ಅವರನ್ನು ಬೆಳಗಾವಿ ಕೆ ಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಭಾಸ್ಕರ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ