ದೀನದಯಾಳ್ ವಿಚಾರಧಾರೆ ಪ್ರಚುರ ಪಡಿಸಲು ರಾಜ್ಯಪಾಲರ ಕರೆ
ಪ್ರಗತಿವಾಹಿನಿ, ಬೆಳಗಾವಿ :
ದೇಶದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಯಂತ್ರೋಪಕರಣಗಳ ಬಳಕೆಯ ಬದಲು ಮಾನವ ಸಂಪನ್ಮೂಲದ ಮೂಲಕವೇ ಉತ್ಪಾದನೆ ಹೆಚ್ಚಿಸಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ಪರಿಹರಿಸಬಹುದು ಹಾಗೂ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಬಹುದು ಎಂಬುದು ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಚಿಂತನೆಯಾಗಿತ್ತು ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.
ವಿಟಿಯು ಸಭಾಂಗಣದಲ್ಲಿ ಗುರುವಾರ (ಜೂ.೬) ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಾರತೀಯ ಜೀವನಪದ್ಧತಿಯು ಜಗತ್ತಿನಲ್ಲಿ ಸರ್ವಶ್ರೇಷ್ಠ ವಾಗಿದೆ. ಭಾರತೀಯರ ಚಿಂತನೆಯು ತನಗಾಗಿ ಅಲ್ಲ; ಇಡೀ ವಿಶ್ವದ ಹಿತದೃಷ್ಟಿಯಿಂದ ಕೆಲಸ ಮಾಡುವ ಮನೋಭಾವನೆಯನ್ನು ಹೊಂದಿದೆ. ಇದೇ ವಿಚಾರಧಾರೆಯನ್ನು ಪಂ.ದೀನದಯಾಳ್ ಅವರು ಹೊಂದಿದ್ದರು ಎಂದರು.
ನದಿ ಜೋಡಣೆ-ದೀನದಯಾಳ್ ಕನಸು:
ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನದಿಯ ನೀರನ್ನು ರೈತನ ಹೊಲಗಳಿಗೆ ಹರಿಸಲು ನದಿ ಜೋಡಣೆ ಪರಿಕಲ್ಪನೆ ದೀನದಯಾಳ್ ಹೊಂದಿದ್ದರು.
ಸ್ವಾಭಿಮಾನಿ ಜೀವನ ರೂಪಿಸುವ ಮೂಲಕ ಸದೃಢ ಭಾರತ ನಿರ್ಮಾಣದ ಕನಸು ದೀನದಯಾಳ್ ಕಂಡಿದ್ದರು. ಅವರ ಕನಸು ಸಾಕಾರದ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದು ರಾಜ್ಯಪಾಲರಾದ ವಜುಭಾಯಿ ವಾಲಾ ಸಲಹೆ ನೀಡಿದರು.
ದೀನದಯಾಳ ಅವರು ದೊಡ್ಡ ದೊಡ್ಡ ಜಲಾಶಯ ನಿರ್ಮಿಸುವ ಬದಲು ಸಣ್ಣ ಸಣ್ಣ ಜಲಾಶಯಗಳನ್ನು ಸ್ಥಾಪಿಸುವುದು ಸೂಕ್ತ ಎಂದು ಪ್ರತಿಪಾದಿಸುತ್ತಿದ್ದರು. ಇದೇ ಮಾದರಿಯನ್ನು ಗುಜರಾತ್ ರಾಜ್ಯದಲ್ಲಿ ಅನುಸರಿಸಲಾಗಿದೆ ಎಂದು ನೆನಪಿಸಿಕೊಂಡರು.
ಪಂ.ದೀನದಯಾಳ್ ಅವರ ವಿಚಾರ-ಚಿಂತನೆಗಳನ್ನು ಪ್ರಚಾರಪಡಿಸಲು ಅಧ್ಯಯನ ಪೀಠ ಸ್ಥಾಪಿಸಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಅವರು ಅಭಿನಂದನೆ ಸಲ್ಲಿಸಿದರು.
ಇದು ವ್ಯವಹಾರಿಕ ವಿಷಯಗಳ ಅಧ್ಯಯನವಲ್ಲ; ಒಂದು ವಿಚಾರಧಾರೆಯನ್ನು ಪ್ರಚುರಪಡಿಸುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಕೈಜೋಡಿಸುವುದು ಈ ಪೀಠದ ಕೆಲಸವಾಗಿದೆ.
ಸರಳ ಜೀವನ; ಅತ್ಯುನ್ನತ ಚಿಂತನೆ ಭಾರತೀಯರದಾಗಿದೆ. ಇದೇ ರೀತಿಯಲ್ಲಿ ಬದುಕಿದ ದೀನದಯಾಳ್ ಅವರು, ನಾಗರಿಕರಿಗೆ ಸ್ವಾಭಿಮಾನದ ಬದುಕು ಕಲ್ಪಿಸುವ ಮಾರ್ಗಗಳನ್ನು ತಿಳಿಸಿದ್ದರು.
ದೀನದಯಾಳ್ ಅವರ ವಿಚಾರಧಾರೆ, ಅರ್ಥನೀತಿ, ಉದ್ಯೋಗ ನೀತಿಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧ್ಯಯನ ಪೀಠ ಮಾಡಲಿ ಎಂದು ರಾಜ್ಯಪಾಲರು ಸಲಹೆ ನೀಡಿದರು.
ಸಮಾರಂಭದಲ್ಲಿ ಆಶಯ ನುಡಿಗಳನ್ನು ಹೇಳಿದ ನವದೆಹಲಿಯ ಪಂ.ದೀನದಯಾಳ್ ಶೋಧ ಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಅತುಲ್ ಜೈನ್, ಅತ್ಯಂತ ಶಿಸ್ತಿನ ಜೀವನಶೈಲಿ ರೂಢಿಸಿಕೊಂಡಿದ್ದ ಪಂ.ದೀನದಯಾಳ್ ಅವರು ನಿಸರ್ಗದ ಶೋಷಣೆ ಕೈಬಿಟ್ಟು ಧರ್ಮಸಮ್ಮತ ಹಾಗೂ ನೈತಿಕತೆಯ ಮಾರ್ಗದಲ್ಲಿ ನಡೆಯುವ ಚಿಂತನೆಯನ್ನು ನಮ್ಮ ಮುಂದಿರಿಸಿದ್ದರು ಎಂದು ಹೇಳಿದರು.
ದಾರ್ಶನಿಕ, ಚಿಂತಕ, ರಾಜಕೀಯ ತಜ್ಞ, ಅತ್ಯುತ್ತಮ ಸಂಘಟಕರಾಗಿದ್ದ ಪಂ.ದೀನದಯಾಳ್ ಅವರು, ಭಾರತೀಯರ ದೃಷ್ಟಿಕೋನದ ಹಿನ್ನೆಲೆಯಲ್ಲಿ ರಾಜಕೀಯ ಚಿಂತನೆಯನ್ನು ಪಸರಿಸಿದರು.
ನಿಸರ್ಗದ ರಕ್ಷಣೆಗೆ ಐವತ್ತು ವರ್ಷಗಳ ಹಿಂದೆ ಪಂ.ದೀನದಯಾಳ್ ಪ್ರಸ್ತುತಪಡಿಸಿದ ವಿಷಯಗಳನ್ನೇ ಇದೀಗ ವಿಶ್ವಸಂಸ್ಥೆಯು ಧ್ಯೇಯಗಳನ್ನಾಗಿ ಅಳವಡಿಸಿಕೊಂಡು ಮುನ್ನಡೆದಿದೆ. ಆದರೆ ಎಲ್ಲಿಯೂ ದೀನದಯಾಳ್ ಅವರನ್ನು ಸ್ಮರಿಸಿಕೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಂ.ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠ ಆರಂಭ ಸಂತಸದ ವಿಷಯ ಎಂದು ಅತುಲ್ ಜೈನ್ ಹೇಳಿದರು.
ತಂತ್ರಜ್ಞಾನದ ಅಳವಡಿಕೆಯ ಭರದಲ್ಲಿ ನಮ್ಮ ದೇಶದ ಸಾಂಸ್ಕೃತಿಕ ಮೂಲಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ರಾಜ್ಯಪಾಲ ವಜುಭಾಯಿ ವಾಲಾ ಅವರು, ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪ ಬೆಳಗುವ ಮೂಲಕ ಅಧ್ಯಯನ ಪೀಠವನ್ನು ಉದ್ಘಾಟಿಸಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ರಂಗರಾಜ ವನದುರ್ಗ ಹಾಗೂ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪಂಡಿತ ದೀನ್ ದಯಾಳ ಅಧ್ಯಯನ ಪೀಠದ ಪ್ರಮುಖ ಸೂತ್ರದಾರರಾದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಿವಾನಂದ ಹೊಸಮನಿ ಸ್ವಾಗತಿಸಿದರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಸಿದ್ದು ಆಲಗೂರ ಅತಿಥಿಗಳನ್ನು ಪರಿಚಯಿಸಿದರು. ವಿಶ್ವವಿದ್ಯಾಲಯದ ಪಂ.ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠದ ಸಂಯೋಜಕ ಡಾ.ಮಹಾಂತೇಶ ಕುರಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ