CrimeKannada NewsKarnataka NewsLatest

*ಪುಲಿಕೇಶಿನಗರ ಸ್ಫೋಟ ಪ್ರಕರಣ*: *ಪಾರ್ಸೆಲ್ ತಂದ ವ್ಯಕ್ತಿಗಾಗಿ ಪೊಲೀಸರ ತೀವ್ರ ಶೋಧ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಪುಲಿಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಪಾರ್ಸೆಲ್ ಎಲ್ಲಿಂದ ಬಂತು, ಅದನ್ನು ತಂದುಕೊಟ್ಟವರು ಯಾರು ಎಂಬುದನ್ನು ಪತ್ತೆಹಚ್ಚಲು 100ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಸ್ಫೋಟಕ್ಕೆ ನಿಖರ ಕಾರಣ ತಿಳಿಯಲು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಗಾಗಿ ಕಾಯುತ್ತಿದ್ದಾರೆ. ಪ್ರಕರಣದ ವಿವಿಧ ಆಯಾಮಗಳ ತನಿಖೆಗಾಗಿ ಐದಕ್ಕೂ ಹೆಚ್ಚು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪೂರ್ವ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಪುಲಿಕೇಶಿನಗರ ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.

ಸ್ಫೋಟಕ್ಕೆ ಕಾರಣವಾದ ವಸ್ತು ಹೊರಗಿನಿಂದ ಬಂದಿರಬಹುದೇ ಎಂಬ ಅನುಮಾನದಲ್ಲಿ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಗಿಫ್ಟ್ ಅಥವಾ ಕೊರಿಯರ್ ಮೂಲಕ ಪಾರ್ಸೆಲ್ ಕಳುಹಿಸಿದ್ದರೆ ಪತ್ತೆಹಚ್ಚುವುದು ಕಷ್ಟವಾಗಬಹುದು ಎಂಬ ಹಿನ್ನೆಲೆಯಲ್ಲಿ, ಯಾರಾದರೂ ನೇರವಾಗಿ ಕಟ್ಟಡಕ್ಕೆ ಬಂದು ಪಾರ್ಸೆಲ್ ನೀಡಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಹೀಗಾಗಿ ಪಾರ್ಸೆಲ್ ತಂದುಕೊಟ್ಟ ವ್ಯಕ್ತಿಯನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.

ಪ್ರಕರಣದ ತನಿಖೆಯಲ್ಲಿ ಗಾಯಾಳುಗಳ ಹೇಳಿಕೆಗಳು ಕೂಡ ಮಹತ್ವ ಪಡೆದಿವೆ. ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಸೆಕ್ಯುರಿಟಿ ಗಾರ್ಡ್ ಅಲ್ಲಾವುದ್ದೀನ್ ಸ್ಫೋಟದ ಆಘಾತದಿಂದ ಇನ್ನೂ ಗೊಂದಲದಲ್ಲಿದ್ದು, ಪಾರ್ಸೆಲ್ ಕುರಿತು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿರುವುದು ತನಿಖೆಗೆ ಸವಾಲಾಗಿದೆ. ಮತ್ತೊಂದೆಡೆ, ಗಾಯಾಳು ಸೂರಜ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಸದ್ಯ ಅವರಿಂದ ಸಮರ್ಪಕವಾಗಿ ಹೇಳಿಕೆ ದಾಖಲಿಸಿಕೊಳ್ಳಲು ಸಾಧ್ಯವಾಗಿಲ್ಲ.

ಇದೇ ವೇಳೆ, ಕಟ್ಟಡದ ಮಾಲೀಕ ರೆಹಮಾನ್ ಅವರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಮತ್ತು ಸ್ಫೋಟ ಹೇಗೆ ಸಂಭವಿಸಿತು ಎಂಬುದು ತಿಳಿದಿಲ್ಲ ಎಂಬ ನಿಲುವನ್ನು ರೆಹಮಾನ್ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ದ್ವೇಷ ಸೇರಿದಂತೆ ಇತರ ಸಾಧ್ಯತೆಗಳ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸದ್ಯ ಎಫ್‌ಎಸ್‌ಎಲ್ ವರದಿ, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಗಾಯಾಳುಗಳ ಹೇಳಿಕೆಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ. ಪಾರ್ಸೆಲ್‌ನ ಮೂಲ, ಅದನ್ನು ತಲುಪಿಸಿದ ವ್ಯಕ್ತಿ ಮತ್ತು ಸ್ಫೋಟದ ಹಿಂದಿರುವವರನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button