LatestNationalPolitics

*ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಪರಿಚಿತರ ಗುಂಡಿನ ದಾಳಿಗೆ ಬಲಿ*

ಪ್ರಗತಿವಾಹಿನಿ ಸುದ್ದಿ: ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಮ್ಜಾ ಬುರ್ಹಾನ್‌ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

2019ರ ಪುಲ್ವಾಮಾ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಹುಮ್ಜಾ ಬುರ್ಹಾನ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. ತರಬೇತುದಾರನ ರೂಪದಲ್ಲಿ ಅಡಗಿದ್ದ ಹಮ್ಜಾ ಬುರ್ಹಾನ್ ಅಲಿಯಾಸ್ ‘ಡಾಕ್ಟರ್’ ಮೇಲೆ ಅಪರಿಚಿತ ವ್ಯಕ್ತಿಗಳು ಮುಜಾಫರಾಬಾದ್‌ ಕಚೇರಿಯೊಳಗೆ ನುಗ್ಗಿ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಜಮ್ಮು-ಕಾಶ್ಮೀರದ ಪುಲ್ವಾಮಾ ಮೂಲದ ಹಮ್ಜಾ ಬುರಾನ್‌ನ ನಿಜವಾದ ಹೆಸರು ಅರ್ಜುಮಂಡ್ ಗುಲ್ಜಾರ್ ದಾರ್ ಎಂದು ತಿಳಿದುಬಂದಿದೆ. 2022ರಲ್ಲಿ ಭಾರತದ ಗೃಹ ಸಚಿವಾಲಯ ಆತನನ್ನು ಉಗ್ರನೆಂದು ಘೋಷಿಸಿತ್ತು. ಈತ ಪಾಕಿಸ್ತಾನ ಬೆಂಬಲಿತ ‘ಅಲ್-ಬದರ್’ ಭಯೋತ್ಪಾದಕ ಸಂಘಟನೆಯ ಹಿರಿಯ ಕಮಾಂಡರ್ ಆಗಿದ್ದನು. ಮೂಲತಃ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರತ್ನಿಪೋರಾದ ನಿವಾಸಿಯಾಗಿದ್ದ ಈತ, ವರ್ಷಗಳ ಹಿಂದೆ ಗಡಿ ದಾಟಿ ಪಾಕಿಸ್ತಾನ ಸೇರಿಕೊಂಡಿದ್ದ.

2019ರ ಪುಲ್ವಾಮಾ ಉಗ್ರರ ದಾಳಿಯಲ್ಲಿ ಈತ ಓವರ್ ಗ್ರೌಂಡ್ ವರ್ಕರ್ ಆಗಿ ಪ್ರಮುಖ ಸಂಚು ರೂಪಿಸಿದ್ದ. ದಕ್ಷಿಣ ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸುವ ಮತ್ತು ಭಯೋತ್ಪಾದಕರಿಗೆ ಧನಸಹಾಯ ಮಾಡುವ ಕೆಲಸ ಮಾಡುತ್ತಿದ್ದ.

ಫೆಬ್ರವರಿ 14, 2019ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ವಾಹನಗಳ ಮೇಲೆ ಆತ್ಮಾಹುತಿ ದಾಳಿ ನಡೆದಿತ್ತು. ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಭದ್ರತಾ ಪಡೆಗಳ ಬಸ್‌ಗೆ ಡಿಕ್ಕಿ ಹೊಡೆಸಲಾಗಿತ್ತು. ಈ ದಾಳಿ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button