*ಕೆಲವೇ ತಿಂಗಳಲ್ಲಿ ಸರ್ವನಾಶವಾದ ಬೆಳಗಾವಿ-ಚೋರ್ಲಾ ರಸ್ತೆ* *ಪರಿಸ್ಥಿತಿ ವೀಕ್ಷಣೆಗೆ ಆಗಮಿಸುವಂತೆ ಸಚಿವರಿಗೆ ನಾಗರಿಕರ ಆಹ್ವಾನ*


ಪ್ರಗತಿವಾಹಿನಿ ಸುದ್ದಿ, ಖಾನಾಪುರ: “ಬೇಸಿಗೆಯಲ್ಲಿ ವಾರ್ತಾ ಇಲಾಖೆಯ ವಾಹನದಲ್ಲಿ ಕುಳಿತು ಬೆಳಗಾವಿ- ಚೋರ್ಲಾ ರಸ್ತೆಯನ್ನು ವೀಕ್ಷಿಸಿ ಹೋಗಿದ್ದ ಸಚಿವರು ಈಗ ಮತ್ತೊಮ್ಮೆ ಕಣಕುಂಬಿಗೆ ಆಗಮಿಸಿ ಈ ರಸ್ತೆಯ ಈಗಿನ ಪರಿಸ್ಥಿತಿಯನ್ನು ಅವಲೋಕಿಸಬೇಕು” ಎಂದು ತಾಲ್ಲೂಕಿನ ಕಣಕುಂಬಿ, ಕಾಲಮನಿ, ಜಾಂಬೋಟಿ, ಕುಸಮಳಿ ಗ್ರಾಮಗಳ ನಾಗರಿಕರು ಲೋಕೋಪಯೋಗಿ ಸಚಿವ ಸಚಿವ ಸತೀಶ ಜಾರಕಿಹೊಳಿ ಅವರನ್ನು ಆಹ್ವಾನಿಸಿದ್ದಾರೆ.
ಭಾನುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಣಕುಂಬಿ, ಅಮಟೆ, ಪಾರವಾಡ ಮತ್ತು ಜಾಂಬೋಟಿ ಗ್ರಾಮಗಳ ಪ್ರಮುಖರು, ಗ್ರಾಮ ಪಂಚಾಯತಿಗಳ ಸದಸ್ಯರು ಮತ್ತು ನಾಗರಿಕರು, “ಸಚಿವರು ಕಳೆದ ಬೇಸಿಗೆಯಲ್ಲಿ ಖುದ್ದು ಕಾಳಜಿವಹಿಸಿ ಅಭಿವೃದ್ಧಿಗೊಳಿಸಿದ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿ ಅವರದ್ದೇ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ತೀವ್ರ ನಿರ್ಲಕ್ಷ್ಯ ಮತ್ತು ಕಳಪೆ ಕಾಮಗಾರಿಯ ಕಾರಣ ಅಭಿವೃದ್ಧಿಗೊಂಡ ಮೂರೇ ತಿಂಗಳಲ್ಲಿ ಸಂಪೂರ್ಣ ಹಾಳಾಗಿದೆ.
ರಸ್ತೆ ಉತ್ತಮ ಸ್ಥಿತಿಯಲ್ಲಿದ್ದಾಗ ಸಚಿವರು ಪ್ರವಾಸ ಕೈಗೊಂಡು ರಸ್ತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಈ ರಸ್ತೆಯ ಅವಸಾನದ ಅವಸ್ಥೆಯ ಪರಿಶೀಲನೆಯನ್ನು ಕೈಗೊಂಡು ಕಾನನದಂಚಿನ ಭಾಗದ ಜನತೆಗೆ ನ್ಯಾಯ ಒದಗಿಸಿಕೊಡಬೇಕು. ರಸ್ತೆಯ ಅವೈಜ್ಞಾನಿಕ ಕಾಮಗಾರಿ ಮತ್ತು ದುರವಸ್ಥೆಯ ಕಾರಣ ನಮ್ಮೂರಿನ ಮೂಲಕ ಹಾದುಹೋದ ರಸ್ತೆಯಲ್ಲಿ ಪ್ರತಿನಿತ್ಯ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಲಾರಿಗಳು ರಸ್ತೆ ನಡುವೆ ಕೆಟ್ಟು ನಿಂತು ವಾಹನ ದಟ್ಟಣೆ ನಿರ್ಮಿಸುತ್ತಿವೆ. ನಮ್ಮ ಈ ಎಲ್ಲ ಸಮಸ್ಯೆಗಳನ್ನು ಸಚಿವರು ಕಣಕುಂಬಿಗೆ ಬಂದಾಗ ವಿವರಿಸುತ್ತೇವೆ ಮತ್ತು ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಈ ರಸ್ತೆಯ ದುರಸ್ತಿ ಕೈಗೊಳ್ಳಬೇಕು ಎಂದು ಸಚಿವರನ್ನು ಆಗ್ರಹಿಸಲಿದ್ದೇವೆ” ಎಂದು ವಿವರಿಸಿದರು.
ಅಮಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ ಭರಣಕರ ಮಾತನಾಡಿ, “ಬೆಳಗಾವಿ ತಾಲ್ಲೂಕಿನ ರಣಕುಂಡೆ ಕ್ರಾಸ್ನಿಂದ ಕರ್ನಾಟಕ-ಗೋವಾ ಗಡಿಯವರೆಗಿನ ಈ ರಸ್ತೆ ಸುಧಾರಣೆ ಕಾಮಗಾರಿ ಕಳೆದ ಮೇ ತಿಂಗಳಲ್ಲಿ ಪೂರ್ಣಗೊಂಡಿದೆ. ಈ ರಸ್ತೆಯನ್ನು ಡಬಲ್ ಕೋಟಿಂಗ್ ಡಾಂಬರಿಕರಣ, ಕುಸಮಳಿ ಬಳಿ ಮಲಪ್ರಭಾ ನದಿಗೆ ಸೇತುವೆ ನಿರ್ಮಾಣ, ರಸ್ತೆಯ ಎರಡೂ ತುದಿಗಳಲ್ಲಿ ಬಿಳಿ ಬಣ್ಣದ ಪಟ್ಟಿ ಅಳವಡಿಕೆ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಮಾಡಿರುವುದಾಗಿ ದಾಖಳೆಗಳು ಹೇಳುತ್ತವೆ. ವಾಸ್ತವದಲ್ಲಿ ಇವ್ಯಾವೂ ಘಟನಾ ಸ್ಥಳದಲ್ಲಿಲ್ಲ. ಬೈಲೂರು-ಕ್ರಾಸ್ ನಿಂದ ರಣಕುಂಡೆವರೆಗಿನ ಕಾಮಗಾರಿ ಕೈಗೊಂಡಿಲ್ಲ. ರಸ್ತೆಯ ಎರಡೂ ಬದಿ ಬಿಳಿಪಟ್ಟಿ ಅಳವಡಿಸಿಲ್ಲ. ರಸ್ತೆಯ ಎರಡೂ ಕಡೆ ಚರಂಡಿ ಕಾಮಗಾರಿ ಕೈಗೊಂಡಿಲ್ಲ. ಇತ್ತೀಚಿನ ಮಳೆಗೆ ರಸ್ತೆ ತೀವ್ರವಾಗಿ ಹಾಳಾಗಿದೆ. ರಸ್ತೆಯ ಡಾಂಬರ್ ಕಿತ್ತುಹೋಗಿದ್ದರಿಂದ ಅಲ್ಲಲ್ಲಿ ರಸ್ತೆ ಹಾಳಾಗಿದೆ. ಅಮಟೆ, ಚಿಕಲೆ, ಪಾರವಾಡ ಭಾಗದಲ್ಲಿ ಡಾಂಬರ್ ಮೇಲ್ಪದರ ಕಿತ್ತು ಹೋಗಿದೆ. ಹೀಗಾಗಿ ರಸ್ತೆ ಮೊದಲು ಹೇಗಿತ್ತೋ ಈಗೂ ಅದೇ ಸ್ಥಿತಿ ತಲುಪಿದೆ” ಎಂದು ದೂರಿದರು.
ಬೆಳಗಾವಿ ಚೋರ್ಲಾ ರಾಜ್ಯ ಹೆದ್ದಾರಿಯ ದುರವಸ್ಥೆ ಬಗ್ಗೆ ಮಾಹಿತಿ ಪಡೆಯಲು ಲೋಕೋಪಯೋಗಿ ಇಲಾಖೆಯ ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಬೆಳಗಾವಿ-ಚೋರ್ಲಾ ಹೆದ್ದಾರಿಯ 26.13 ಕಿಮೀ ಯಿಂದ 69.48 ಕಿಮೀವರೆಗೆ (ರಣಕುಂಡೆಯಿಂದ ಚೋರ್ಲಾ) ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮಳೆಗಾಲದ ಕಾರಣ ಅಲ್ಲಲ್ಲಿ ಕಾಮಗಾರಿ ಬಾಕಿ ಉಳಿದಿದೆ. ಮಳೆಗಾಲದ ನಂತರ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು.
-ವಿಠ್ಠಲ ಹಲಗೇಕರ, ಖಾನಾಪುರ ಶಾಸಕ.
ಕರ್ನಾಟಕ-ಗೋವಾ ರಾಜ್ಯಗಳ ನಡುವೆ ಬಾಂಧವ್ಯ ಬೆಸೆಯುವ ಈ ರಸ್ತೆ ದುರಸ್ತಿಯ ಬಳಿಕ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ನಮಗೆಲ್ಲ ಇದರ ಕಳಪೆ ಕಾಮಗಾರಿ ತೀವ್ರ ಸಮಸ್ಯೆ ತಂದೊಡ್ಡಿದೆ. ಬೆಳಗಾವಿ ಚೋರ್ಲಾ ರಸ್ತೆಯ ಎರಡೂ ಬದಿ ಬಿಳಿ ಪಟ್ಟಿ ಅಳವಡಿಸಿಲ್ಲ. ಕೆಲವೆಡೆ ರಸ್ತೆ ಮಧ್ಯದಲ್ಲಿ ದೊಡ್ಡ ತೆಗ್ಗುಗಳು ನಿರ್ಮಾಣವಾಗಿವೆ. ಈ ತೆಗ್ಗುಗಳನ್ನು ತಪ್ಪಿಸುವ ಭರದಲ್ಲಿ ಅನೇಕ ವಾಹನ ಅಪಘಾತ ಸಂಭವಿಸಿವೆ. ರಸ್ತೆಯ ಎರಡೂ ಬದಿಗಳಲ್ಲಿ ಪಕ್ಕಾ ಚರಂಡಿ ನಿರ್ಮಿಸದೇ ಕೇವಲ ಮಣ್ಣು ಹಾಕಲಾಗಿದೆ. ಈ ಭಾಗದಲ್ಲಿ ಮಳೆ ಅತೀ ಹೆಚ್ಚು ಸುರಿಯವ ಮಾಹಿತಿ ಇದ್ದರೂ ರಸ್ತೆಯ ಪಕ್ಕದಲ್ಲಿ ಖಡಿ ಹಾಕಿಲ್ಲ. ಮಳೆಯ ನೀರು ಹರಿದುಹೋಗಲು ಚರಂಡಿ ನಿರ್ಮಿಸಿಲ್ಲ. ಹೀಗಾಗಿ ಈ ರಸ್ತೆಯಲ್ಲಿ ಪ್ರತಿದಿನ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ. ದಯವಿಟ್ಟು ಈ ರಸ್ತೆಯನ್ನು ದುರಸ್ತಿಗೊಳಿಸಿ ಪುಣ್ಯ ಕಟ್ಟಿಕೊಳ್ಳಿ.
-ಕಣಕುಂಬಿ, ಕಾಲಮನಿ ಮತ್ತು ಕುಸಮಳಿ ಭಾಗದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು.